ಬೆಂಗಳೂರು: ಐಎಂಎ ಹಗರಣದ ಸಂಬಂಧ ಮಾಹಿತಿ ಪಡೆಯಲು ಸಚಿವ ಜಮೀರ್ ಅಹಮ್ಮದ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬುಲಾವ್ ಕೊಟ್ಟಿದ್ದರು. ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡಲು ಕೆಪಿಸಿಸಿ ಕಚೇರಿಗೆ ಆಗಮಿಸಿದ ಸಚಿವ ಜಮೀರ್ ಅಹಮ್ಮದ್ ಖಾನ್, ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚಿಸಿದರು.
ಸಚಿವ ಜಮೀರ್ಗೆ ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹಮ್ಮದ್ ಹಾಗೂ ರಿಜ್ವಾನ್ ಅರ್ಷದ್ ಸಾಥ್ ಕೊಟ್ಟರು. ಇಡೀ ಪ್ರಕರಣದ ಮಾಹಿತಿ ಜೊತೆಗೆ ರೋಶನ್ ಬೇಗ್ ಪಾತ್ರದ ಬಗ್ಗೆಯೂ ದಿನೇಶ್ ಗುಂಡೂರಾವ್ ಮಾಹಿತಿ ಪಡೆದರು.
ಭೇಟಿ ಬಳಿಕ ಸಚಿವ ಜಮೀರ್ ಅಹಮ್ಮದ್ ಖಾನ್ ಮಾತನಾಡಿ, ದಿನೇಶ್ ಜತೆ ಐಎಂಎ ಬಗ್ಗೆ ಇದುವರೆಗೆ ಆಗಿರುವ ತನಿಖೆ ಕುರಿತು ಮಾಹಿತಿ ನೀಡಿದ್ದೇನೆ. ರೋಷನ್ ಬೇಗ್ ಪಾತ್ರ ಇದೆ ಅನ್ನೋದಕ್ಕೆ ದಾಖಲೆ ಬೇಕು. ಆಡಿಯೋದಲ್ಲಿ ಅವರ ಹೆಸರು ಪ್ರಸ್ತಾಪಿಸಲಾಗಿದೆ. ಆದರೆ ಆಡಿಯೋವನ್ನ ಧ್ವನಿ ಪರೀಕ್ಷೆಗೆ ಕಳುಹಿಸಲಾಗಿದೆ. ಅದು ಮನ್ಸೂರ್ ಧ್ವನಿ ಅನ್ನೋದು ಸಾಬೀತಾದ್ರೆ ರೋಷನ್ ಬೇಗ್ ಪಾತ್ರದ ಬಗ್ಗೆ ಮಾತನಾಡಬಹುದು ಎಂದರು.
ದಿನೇಶ್ ಗುಂಡೂರಾವ್ಗೆ ಎಲ್ಲಾ ಮಾಹಿತಿ ನೀಡಿದ್ದೇವೆ. ನಾನು ಈ ವಿಚಾರದಲ್ಲಿ ಮೃದು ಧೋರಣೆ ತಾಳಿಲ್ಲ. ಸಿಎಂ ಭೇಟಿ ಮಾಡಿ ನಾವೇ ತನಿಖೆಗೆ ಒತ್ತಾಯಿಸಿದ್ದು, ಜನರಿಗೆ ಅನ್ಯಾಯ ಆಗಿದೆ ಅಂತ ಮೊದಲು ಹೋದವನು ನಾನು ಎಂದು ಬಿಎಸ್ವೈ ವಿರುದ್ಧ ಜಮೀರ್ ವಾಗ್ದಾಳಿ ನಡೆಸಿದರು.