ಬೆಂಗಳೂರು: ಹಾಸನ ಲೋಕಸಭೆ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು ಬೇರೆ ಕ್ಷೇತ್ರ ಹುಡುಕುತ್ತಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರಿಗೆ ಸೂಕ್ತ ಕ್ಷೇತ್ರ ಸಿಗುತ್ತಿಲ್ಲವಂತೆ.
ಹಾಸನದಿಂದ ಈ ಬಾರಿ ದೇವೇಗೌಡರು ಸ್ಪರ್ಧಿಸುವುದಿಲ್ಲ. ಬದಲಾಗಿ ಮೊಮ್ಮಗ ಪ್ರಜ್ವಲ್ ರೇವಣ್ಣ ರಾಜಕೀಯ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟು, ಅವರು ಮಂಡ್ಯದಿಂದ ಸ್ಪರ್ಧಿಸುತ್ತಾರೆ ಎಂಬ ಮಾತು ಆರು ತಿಂಗಳ ಹಿಂದೆಯೇ ಕೇಳಿಬಂದಿತ್ತು. ಅದಾದ ನಂತರ ಕಾಂಗ್ರೆಸ್ ಜತೆಗಿನ ಮೈತ್ರಿಯ ಹಿನ್ನೆಲೆ ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಿದ್ದು, ಗೆಲುವು ಸುಲಭ ಎಂಬ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗುತ್ತಿತ್ತು.
ಆದರೆ ಕ್ಷೇತ್ರ ಬದಲಾಗುತ್ತಲೇ ಇದ್ದು, ದೇವೇಗೌಡರು ಬೆಂಗಳೂರು ಉತ್ತರ ಬದಲು ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬ ಮಾತು ಕಳೆದ ವಾರ ಕೇಳಿಬಂತು. ಅದಾದ ಮೇಲೆ ತುಮಕೂರಿನಿಂದ ಕಣಕ್ಕಿಳಿಯುತ್ತಾರೆ ಎನ್ನುವ ಮಾತು ನಿನ್ನೆ ಮೊನ್ನೆಯವರೆಗೂ ಚಾಲ್ತಿಯಲ್ಲಿತ್ತು. ಆದರೆ ಇದೀಗ ದೊಡ್ಡಗೌಡರು ಯಾವುದೂ ಬೇಡ, ಸ್ವಕ್ಷೇತ್ರಕ್ಕೆ ಮರಳೋಣ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯಸಭೆಯತ್ತ ದೇವೇಗೌಡರ ಚಿತ್ತ:
ಒಂದು ಮೂಲದ ಪ್ರಕಾರ ದೊಡ್ಡಗೌಡರು ಮೊಮ್ಮಕ್ಕಳ ರಾಜಕೀಯ ಭವಿಷ್ಯ ರೂಪಿಸಲು ಹೋಗಿ ತಮ್ಮ ಕಡೆಯ ಲೋಕಸಭೆ ಸ್ಪರ್ಧೆಯಲ್ಲಿ ಸೋಲುಂಡು ಬಿಡುತ್ತಾರಾ ಅನ್ನುವ ಮಾತುಗಳು ಕೇಳಿಬಂದವು. ಎರಡು ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎನ್ನುವ ವದಂತಿ ಕೂಡ ಹಬ್ಬಿತು. ಇದೀಗ ರಾಜ್ಯಸಭೆಯತ್ತ ಚಿತ್ತ ಹರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದು ಕೂಡ ಅಂತೆ ಕಂತೆಯ ಪಟ್ಟಿಗೆ ಸೇರಿದ್ದರೂ, ದೊಡ್ಡಗೌಡರು ಈ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎಂಬ ಮಾತಿದೆ. ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಗೆಲುವಿಗೆ ಅವಕಾಶ ಇರುವ ಕ್ಷೇತ್ರದಲ್ಲಿ ಮೊಮ್ಮಕ್ಕಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು, ತಾವು ರಾಜ್ಯಸಭೆಗೆ ಆಯ್ಕೆಯಾಗುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ ಎಂಬ ಮಾತಿದೆ.
ಕಾಂಗ್ರೆಸ್ ಬಳಿ ಜೆಡಿಎಸ್ ಈ ಚುನಾವಣೆಯಲ್ಲಿ 12 ಕ್ಷೇತ್ರವನ್ನು ಕೇಳಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಕಡೆಗೆ 8ಕ್ಕೆ ಬಂದು ನಿಂತಿದೆ ಎನ್ನಲಾಗಿದೆ. ಜೆಡಿಎಸ್ ಪಾಲಿಗೆ ಇದು ಹೆಚ್ಚಿನ ಸೀಟಾದರೂ, ದೇವೇಗೌಡರ ನಿರೀಕ್ಷೆ ಮಾತ್ರ ಹುಸಿಯಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಒಟ್ಟಾರೆ ಜೆಡಿಎಸ್ ವರಿಷ್ಠರಿಗೆ ಕ್ಷೇತ್ರ ಆಯ್ಕೆಯಲ್ಲಿ ಸಾಕಷ್ಟು ಗೊಂದಲ ಎದುರಾಗಿದ್ದು, ಇನ್ನು ಕೆಲವೇ ದಿನದಲ್ಲಿ ಘೋಷಣೆಯಾಗುವ ಲೋಕಸಭೆ ಚುನಾವಣೆಗೆ ದೇವೇಗೌಡರು ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈ ನಡುವೆ ಅವರು ರಾಜ್ಯಸಭೆ ಮೂಲಕ ಪ್ರವೇಶಿಸುವ ಯೋಚನೆಯನ್ನು ಕೂಡ ಮಾಡಿದ್ದಾರಾ ಎನ್ನುವುದಕ್ಕೆ ಇನ್ನು ಕೆಲವೇ ದಿನದಲ್ಲಿ ಉತ್ತರ ಸಿಗಲಿದೆ.