ಬೆಂಗಳೂರು: ಬಿಬಿಎಂಪಿ ಮೇಯರ್ ಗಂಗಾಂಬಿಕೆ ಹಾಗೂ ಬಿಬಿಎಂಪಿಯ ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ ನಡುವೆ ಲೆಟರ್ ವಾರ್ ಶುರುವಾಗಿದೆ. ವಿಶ್ವ ಪರಿಸರ ದಿನದಂದು ಮೇಯರ್ ಗಂಗಾಬಿಕೆ ಪೋಸ್ ಕೊಡಲು ಗಿಡ ನೆಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ವ್ಯಂಗ್ಯ ಮಾಡಿದ್ದಾರೆ.
ಗಿಡ ನೆಡುವ ಮೂಲಕ ಮೇಯರ್ ಗಂಗಾಂಬಿಕೆ ಹಾಗೂ ಅಧಿಕಾರಿ ವರ್ಗದವರು ಪರಿಸರ ದಿನಾಚರಣೆ ಆಚರಿಸಿದ್ದರು. ಆದ್ರೆ ಮೇಯರ್ ನಡೆಯನ್ನು ಟೀಕಿಸಿ, ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪತ್ರ ಬರೆದಿದ್ದು, ಈ ಪತ್ರಕ್ಕೆ ಉತ್ತರಿಸಿರುವ ಮೇಯರ್ ಅವರ ಲೆಟರ್ ಇದೀಗ ಬಹಿರಂಗವಾಗಿದೆ.

ಈ ಬಗ್ಗೆ ಮಾತನಾಡಿದ ಮೇಯರ್ ಗಂಗಾಂಬಿಕೆ, ಪದ್ಮನಾಭರೆಡ್ಡಿಯವರು ಅನೇಕ ವರ್ಷಗಳಿಂದ ಕಾರ್ಪೊರೇಟರ್ ಆಗಿದ್ದಾರೆ. ಅವರು ಕಾರ್ಪೊರೇಟರ್ ಆದಾಗಿನಿಂದಲೂ ಈವರೆಗೆ ಗಿಡಮರಗಳನ್ನು ನೆಟ್ಟು, ಬೆಳೆಸಿ ಅವರ ವಾರ್ಡ್ ಇದೀಗ ನೆರಳಿನ ನಂದನವಾಗಿದೆಯೇ? ಎಂದು ಪರೋಕ್ಷವಾಗಿ ತಿವಿದಿದ್ದಾರೆ.
