ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆದ ನಂತರ ಕುಮಾರಸ್ವಾಮಿ ಬದಲಾಗಿದ್ದಾರೆ ಎನ್ನುವ ಮಾತುಗಳು ಸಿಎಂ ಆಪ್ತವಲಯದಲ್ಲೇ ಕೇಳಿಬಂದಿವೆ.
ಹೌದು, ಕುಮಾರಸ್ವಾಮಿ ಅವರ ಮಾಧ್ಯಮ ಸಲಹೆಗಾರರಾಗಿದ್ದವರೇ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರ ಬರೆದಿದ್ದಾರೆ. ಕುಮಾರಸ್ವಾಮಿ ಅವರ ಮಾಧ್ಯಮ ಸಲಹೆಗಾರ ಆಗಿ ಕೆಲಸ ಮಾಡಿದ್ದ ಸದಾನಂದ ತಮ್ಮ ಫೇಸ್ಬುಕ್ ಪುಟದಲ್ಲಿ ಕಾದಂಬರಿಯಂತೆ ಸಿಎಂ ಬದಲಾದ ರೀತಿಯನ್ನು ವಿವರಿಸಿದ್ದಾರೆ.

ನೀವು 20-20 ಸರ್ಕಾರದಲ್ಲಿದ್ದಂತಹ ಸಿಎಂ ಕುಮಾರಸ್ವಾಮಿ ಅಲ್ಲ, ಮಾಜಿ ಸಿಎಂ ಆಗಿದ್ದರೂ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಿರಿ. ತಾಯಿ ಕರುಳಿನ ಕುಮಾರಣ್ಣ ಸಿಎಂ ಆಗಲಿ ಅಂತ ಬಡವರು ಹರಸಿದ್ದರು. ದೈವಾನುಗ್ರಹದಿಂದ ಸಿಎಂ ಸ್ಥಾನ ಕೂಡ ಅಲಂಕರಿಸಿದಿರಿ. ನಂತರ ಇವೆಲ್ಲವೂ ಹಳಿ ತಪ್ಪಿದೆ. ಜನರ ಕಷ್ಟಕ್ಕೆ ಸ್ಪಂದಿಸದ ಐಎಎಸ್ ಅಧಿಕಾರಿಗಳನ್ನ ನೀವೇ ಆಯ್ಕೆ ಮಾಡಿರುವವರು ಎಂದು ಫೇಸ್ಬುಕ್ ಮೂಲಕ ಸಿಎಂಗೆ ಬಹಿರಂಗ ಪತ್ರ ಬರೆದಿದ್ದಾರೆ.
ಇನ್ನು ಸಿಎಂ ಆಪ್ತ ಸಹಾಯಕ ಪ್ರಭು ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಮ್ಮ ಎಡ ಬಲದಲ್ಲಿರುವ ಹಕ್ಕ ಬುಕ್ಕರು ದೊಡ್ಡ ಸ್ಥಿತಿಯಲ್ಲಿದ್ದಾರೆ. ನಿಮ್ಮಗ್ಯಾಕೆ ಮಂಕು ಕವಿಯಿತು. ಮುಖ್ಯಮಂತ್ರಿಯಿಂದ ಕೆಲಸ ಆಗುತ್ತಿಲ್ಲ ಎಂದು ಶಾಸಕರುಗಳ ಆರೋಪ ಮಾಡಿದ ಬೆನ್ನಲ್ಲೇ ಸಿಎಂ ಆಪ್ತ ಕೂಡ ಇದೇ ಆರೋಪ ಮಾಡಿದ್ದಾರೆ.
ಸ್ವಕ್ಷೇತ್ರ ಚನ್ನಪಟ್ಟಣದ ಜನರ ಕೆಲಸವೇ ಆಗಿಲ್ಲ ಎಂಬ ಸತ್ಯ ಬಹಿರಂಗವಾಗಿದೆ. ಸಿಎಂ ಆಂಧ್ರ ಶೈಲಿಯಲ್ಲಿ ಸೆಕ್ಯೂರಿಟಿ ಬಳಸಿ ಅಧಿಕಾರ ಮಾಡ್ತಾ ಇದ್ದಾರೆ. ಇದರಿಂದ ಸಾಮಾನ್ಯ ಜನತೆ ನಿಮ್ಮನ್ನ ತಲುಪಲು ಆಗ್ತಿಲ್ಲ. ಕುಮಾರಣ್ಣ ಹೀಗ್ಯಾಕೆ ಆದರು ಅಂತ ಜನ ಪರಿತಪಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಪ್ರಭು, ನರಸಿಂಹ ಮೂರ್ತಿ, ಮಹೇಂದ್ರ ಸಿಎಂ ಕಚೇರಿಯಲ್ಲಿ ಹಕ್ಕ ಬುಕ್ಕರಂತೆ ಇದ್ದು ಹಣ ಮಾಡಿಕೊಂಡರು. ಕಳೆದ 13 ತಿಂಗಳಿಂದ ಹಣ ಮಾಡಿಕೊಂಡಿದ್ದಾರೆ ಎಂದು ಪತ್ರದಲ್ಲಿ ಸದಾನಂದ ಆರೋಪಿಸಿದ್ದಾರೆ. ಹಲವು ಶಾಸಕರು, ಸೋತ ಅಭ್ಯರ್ಥಿಗಳು, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರು ಅಣ್ಣ ಹೀಗೇಕೆ ಬದಲಾಗಿದ್ದಾರೆ ಎಂದು ಕೇಳುತ್ತಾ ಇದ್ದಾರೆ. ಅದಕ್ಕೆ ನನ್ನ ಬಳಿ ಉತ್ತರವಿಲ್ಲ. ಕುಮಾರಸ್ವಾಮಿ ಅವರೇ ದಯಮಾಡಿ ಅರ್ಥ ಮಾಡಿಕೊಳ್ಳಿ ಎಂದು ಪತ್ರದಲ್ಲಿ ಸದಾನಂದ ಮನವಿ ಮಾಡಿದ್ದಾರೆ.
ಕಳೆದ 11 ತಿಂಗಳಿಂದ ಹಲವಾರು ಮಂದಿ ಸಿಎಂ ಭೇಟಿಗೆ ಶತ ಪ್ರಯತ್ನಿಸುತ್ತಿದ್ರೂ ಸಿಎಂ ಅವರನ್ನು ತಲುಪಲಾಗುತ್ತಿಲ್ಲ. ಮೊದಲಿನಂತೆ ಇದ್ದ ಕುಮಾರಸ್ವಾಮಿ ನೀವಲ್ಲ ಎಂದು ಹೇಳಬೇಕು ಅನಿಸಿತ್ತು. ಅದಕ್ಕೆ ಹೇಳಿದ್ದೀನಿ. ತಪ್ಪಿದ್ದರೆ ಕ್ಷಮಿಸಿ ಎಂದು ಬರೆದುಕೊಂಡಿದ್ದಾರೆ.