ಬೆಂಗಳೂರು : ಒಂದೆಡೆ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮತ್ತೊಂದೆಡೆ ಮೂರೂ ರಾಜಕೀಯ ಪಕ್ಷಗಳಲ್ಲಿ ಕೆಲವು ನಾಯಕರು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿಯೇ ನಡೆಯುತ್ತಿದೆ. ಜೊತೆಗೆ ಸುಡು ಬಿಸಿಲು ಬೇರೆ. ಅದನ್ನು ಲೆಕ್ಕಿಸದೆ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಹಾಗೂ ಅಭ್ಯರ್ಥಿಗಳ ಕುಟುಂಬಸ್ಥರು, ಹಿತೈಷಿಗಳು ಮತದಾರನ ಓಲೈಕೆಯಲ್ಲಿ ತೊಡಗಿದ್ದಾರೆ. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಪ್ರಮುಖ ನಾಯಕರು ಇದುವರೆಗೂ ಪ್ರಚಾರಕ್ಕೂ ಬರದೆ ಚುನಾವಣೆಯಿಂದಲೇ ದೂರು ಉಳಿದಿರುವುದು ಸಂಶಯ ಮೂಡಿಸಿದೆ.
ಬೆಂಗಳೂರಿನಲ್ಲಿ ಆರ್.ರೋಷನ್ ಬೇಗ್, ಮಂಡ್ಯ ಜಿಲ್ಲೆಯಲ್ಲಿ ಚಲುವರಾಯಸ್ವಾಮಿ, ಮಳವಳ್ಳಿಯ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಶ್ರೀರಂಗಪಟ್ಟಣ ಮಾಜಿ ಶಾಸಕ ರಮೇಶ್ ಬಂಡಿ ಸಿದ್ದೇಗೌಡ, ಬೆಳಗಾವಿ ಜಿಲ್ಲೆಯ ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ, ಬಳ್ಳಾರಿ ಜಿಲ್ಲೆಯ ಬಿ.ನಾಗೇಂದ್ರ, ಆನಂದ್ ಸಿಂಗ್ ಸೇರಿದಂತೆ ಮೂರು ಪಕ್ಷಗಳ ಮುಖಂಡರು ಇದುವರೆಗೂ ಅಭ್ಯರ್ಥಿಗಳ ಪರ ಪ್ರಚಾರ ನಡೆಸದಿರುವುದು ಉಭಯ ಪಕ್ಷಗಳ ನಾಯಕರಿಗೆ ತಲೆಬಿಸಿ ತರಿಸಿದೆ. ಜೊತೆಗೆ ಆತಂಕವೂ ಮೂಡಿಸಿದೆ. ಪಕ್ಷದೊಳಗಿರುವ ಆಂತರಿಕ ಕಚ್ಚಾಟ ಸೇರಿದಂತೆ ಹಲವು ಕಾರಣಗಳಿಂದ ಮುಖಂಡರು ತಮ್ಮ ಕ್ಷೇತ್ರಗಳಲ್ಲಿ ಪ್ರಚಾರದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ತಮ್ಮ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ನೀಡಬೇಕೆಂದು ಉಮೇಶ್ ಕತ್ತಿ ಪಕ್ಷದ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದರು. ಆದರೆ, ಕೇಂದ್ರದ ವರಿಷ್ಠರು ಅಣ್ಣಾಸಾಹೇಬ್ ಜೊಲ್ಲೆಗೆ ಟಿಕೆಟ್ ನೀಡಿದರು. ಇದರಿಂದ ಮುನಿಸಿಕೊಂಡಿರುವ ಉಮೇಶ್ ಕತ್ತಿ ಸಹೋದರರು ತಮಗೆ ಚುನಾವಣೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇನ್ನು ಸಚಿವ ಸ್ಥಾನ ಕಳೆದುಕೊಂಡು ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿ ನಡೆಯೂ ಕೂಡ ನಿಗೂಢವಾಗಿದೆ. ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸಹ ಪ್ರಚಾರದಿಂದ ದೂರ ಉಳಿದಿದ್ದಾರೆ. ಅದೇ ರೀತಿ ಮಂಡ್ಯದಲ್ಲಿ ದೋಸ್ತಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಜಿಲ್ಲಾ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಚಲುವರಾಯಸ್ವಾಮಿ ಈವರೆಗೂ ಪ್ರಚಾರಕ್ಕೆ ಧುಮುಕಿಲ್ಲ. ಅವರನ್ನು ಅನೇಕ ಬಾರಿ ಕಾಂಗ್ರೆಸ್ ಮುಖಂಡರು ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಸಂಧಾನ ಫಲ ನೀಡಿಲ್ಲ. ಚಲುವರಾಯಸ್ವಾಮಿ ಜೊತೆಗೆ ಮಾಜಿ ಶಾಸಕರಾದ ರಮೇಶ್ ಬಂಡಿ ಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಕಾಂಗ್ರೆಸ್‍ನ ಯಾವುದೇ ಮುಖಂಡರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿಲ್ಲ. .
ಇನ್ನು ಬಳ್ಳಾರಿಯಲ್ಲೂ ಇದೇ ಪರಿಸ್ಥಿತಿ ಇದೆ. ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ದೂರವೇ ಉಳಿದಿದ್ದಾರೆ. ರೆಸಾರ್ಟ್‍ನಲ್ಲಿ ಹಲ್ಲೆಗೊಳಗಾಗಿದ್ದ ವಿಜಯನಗರ ಶಾಸಕ ಆನಂದ್ ಸಿಂಗ್, ಜೈಲು ಪಾಲಾಗಿರುವ ಜೆ.ಗಣೇಶ್, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯಕ್ ಸೇರಿದಂತೆ ಅನೇಕರು ಸಕ್ರಿಯವಾಗಿ ಚುನಾವಣೆಯಲ್ಲಿ ಭಾಗವಹಿಸುತ್ತಿಲ್ಲ.
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡ ರೋಷನ್ ಬೇಗ್, ನಾಯಕರ ವರ್ತನೆಯಿಂದ ಬೇಸತ್ತು ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬಂತೆ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಮೋಸ ಮಾಡಿದೆ ಎಂದು ಬಹಿರಂಗವಾಗಿಯೇ ಆರೋಪಿಸಿದ್ದರು. ಹೀಗೆ ಎಲ್ಲ ಪಕ್ಷಗಳಲ್ಲೂ ಶಾಸಕರು ಮುನಿಸಿಕೊಂಡು ಚುನಾವಣೆಯಿಂದ ದೂರ ಉಳಿದಿರುವುದು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಅನುಮಾನ ಕಾಡುತ್ತಿದೆ. ಒಟ್ಟಾರೆ, ಏನೇ ಆದರೂ ಈ ಬಾರಿಯ ಲೋಕ ಸಮರ ಕರ್ನಾಟಕದಲ್ಲಿ ರಣರಂಗವಾಗಿದೆ.