ದೊಡ್ಡಬಳ್ಳಾಪುರ: ಜಿಮ್ ಸೇರಿದ ಯುವತಿಯೊಬ್ಬಳು ಟ್ರೇನರ್ನ ಪ್ರೇಮ ಪಾಶದಲ್ಲಿ ಬಿದ್ದು ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದ್ದು, ಆಕೆಗೆ ಕೈಕೊಟ್ಟು ಬೇರೆ ಮದುವೆಯಾಗಲು ಹೊರಟಿದ್ದ ಯುವಕನ ಮೇಲೆ ಸಂತ್ರಸ್ತೆಯು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.
ನಗರದ ಕೋರ್ಟ್ ರಸ್ತೆಯಲ್ಲಿರುವ 'ಬುಲೆಟ್ ಜಿಮ್' ಮಾಲೀಕ ಗೌತಮ್ ಅತ್ಯಾಚಾರ ಪ್ರಕರಣದ ಆರೋಪಿ. ಈತ ಮಹಿಳೆಯರು ಮತ್ತು ಪುರುಷರಿಗೆ ಫಿಟ್ನೆಸ್ ತರಬೇತಿ ಕೊಡುತ್ತಿದ್ದ. ಅಂದವಾಗಿ ಕಾಣುವ ಮತ್ತು ಶ್ರೀಮಂತ ಹುಡುಗಿಯರೇ ಇವನ ಟಾರ್ಗೆಟ್.
ನಗರದ ನಿವಾಸಿ ರಶ್ಮಿ ( ಹೆಸರು ಬದಲಾಯಿಸಲಾಗಿದೆ) ಎಂಬಾಕೆ ಸಹ ಗೌತಮ್ ಬಳಿ ಬಂದು ಫಿಟ್ ನೆಸ್ ತರಬೇತಿ ತೆಗೆದುಕೊಳ್ಳುತ್ತಿದ್ದಳು. ಆಕೆಯ ಜೊತೆ ಪ್ರೀತಿಯ ನಾಟಕವಾಡಿದ್ದ ಗೌತಮ್, ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಪರಿಣಾಮ ಆಕೆ ಈಗ ಗರ್ಭಿಣಿಯಾಗಿದ್ದಾಳೆ.
ಇಷ್ಟಲ್ಲದೇ ಮತ್ತೊಂದು ಯುವತಿ ಜೊತೆ ಲವ್ವಿ ಡವ್ವಿ ಶುರುಮಾಡಿದ್ದ ಗೌತಮ್, ಆಕೆಯ ಜೊತೆ ಮದುವೆ ಸಿದ್ಧತೆ ನಡೆಸಿದ್ದಾನೆ. ಮಗನ ಕೃತ್ಯಕ್ಕೆ ತಂದೆ ತಿಮ್ಮಪ್ಪಯ್ಯ ಅಲಿಯಾಸ್ ಬಡ್ಡಿ ರಾಜಣ್ಣರ ಸಾಥ್ ಕೂಡ ಇದ್ದು, ಘಾಟಿ ಸುಬ್ರಮಣ್ಯದಲ್ಲಿ ಮಗನ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಇನ್ನೊಂದು ವಿಷಯ ಅಂದ್ರೆ, ಮದುವೆಯಾಗುತ್ತಿರುವ ಯುವತಿಯ ಮನೆಯವರಿಗೆ ವಿಚಾರ ತಿಳಿಸದಂತೆ ಮದುವೆ ತಯಾರಿ ನಡೆಸಿದ್ದರು. ಆಕೆ ಕೂಡ ಮನೆಯವರಿಗೆ ಗೊತ್ತಾಗದಂತೆ ಅರ್ಧ ಕೆಜಿ ಚಿನ್ನಾಭರಣ ತೆಗೆದುಕೊಂಡು ಬಂದಿದ್ದಳು.
ಮತ್ತೊಂದು ಮದುವೆಯಾಗುತ್ತಿರುವ ವಿಷಯ ತಿಳಿದ ಸಂತ್ರಸ್ತೆ, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಗೌತಮ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೌತಮ್ ಮತ್ತು ಆತನ ತಂದೆ ಬಡ್ಡಿ ರಾಜಣ್ಣನನ್ನು ಬಂಧಿಸಿದ್ದಾರೆ.