ಬೆಂಗಳೂರು: ಸಚಿವ ಡಿ.ಕೆ ಶಿವಕುಮಾರ್ ಮತ್ತು ಆಪ್ತರ ನಿವಾಸದ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿದೆ.
ಸಚಿವ ಡಿ.ಕೆ ಶಿವಕುಮಾರ್ ಹಾಗೂ ಆಪ್ತರು ತೆರಿಗೆ ವಂಚನೆ ಪ್ರಕರಣದ ವಿಚಾರಣೆ ನಗರದ ಸಿಟಿ ಸಿವಿಲ್ ನ್ಯಾಯಾಲಯ ಸಮುಚ್ಚಯದಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.
ಈ ವೇಳೆ ಆದಾಯ ತೆರಿಗೆ ಇಲಾಖೆ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡಗಿ, ದೆಹಲಿಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸೇರಿದ ವಸತಿ ಸಂಕೀರ್ಣ(ಫ್ಲಾಟ್)ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕ ಹಣಕ್ಕೆ ಸಂಬಂಧಿಸಿದಂತೆ, ಐಟಿ ಅಧಿಕಾರಿಗಳು ದಾಖಲಿಸಿರೋ ದೂರು ಕ್ರಮಬದ್ಧವಾಗಿದೆ. ದಾಳಿ ವೇಳೆ ಸಿಕ್ಕಿರೋ ಹಣ ಮತ್ತು ಒಡವೆಗಳಿಗೆ ಸಮರ್ಪಕ ದಾಖಲೆಗಳಿಲ್ಲ. ಹಾಗಾಗಿ ಡಿಕೆ ಶಿವಕುಮಾರ್ ವಿರುದ್ಧ ಐಟಿ ದೂರು ದಾಖಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಆರ್ಥಿಕ ವರ್ಷ ಮುಗಿಯುವ ಮುಂಚೆಯೇ ದಾಳಿ ಮಾಡೋ ಅಧಿಕಾರ ಐಟಿ ಇಲಾಖೆಗಿದೆ. ಐಟಿ ವಶಪಡಿಸಿಕೊಂಡ ಹಣ ಅಥವಾ ಇತರೆ ವಸ್ತುಗಳಿಗೆ 120 ದಿನಗಳ ಒಳಗೆ ದಾಖಲೆ ಸಲ್ಲಿಸಬೇಕು. ಆದರೆ, ಡಿಕೆ ಶಿವಕುಮಾರ್ ಮತ್ತು ಆಪ್ತರು ಮಾಹಿತಿ ಸಲ್ಲಿಸಿಲ್ಲ. ಹೀಗಾಗಿ ತೆರಿಗೆ ವಂಚನೆ ಮಾಡಿರುವುದನ್ನು ಮೇಲ್ನೋಟಕ್ಕೆ ಮುಚ್ಚಿಟ್ಟಿರೋ ಶಂಕೆ ವ್ಯಕ್ತವಾಗುತ್ತದೆ ಎಂದು ವಾದ ಮಂಡಿಸಿದರು.
ಆದರೆ, ಸಮಯಾವಕಾಶದ ಕೊರತೆಯಿಂದ ಪ್ರತಿವಾದ ಮಂಡನೆಗೆ ಸಚಿವ ಡಿ.ಕೆ.ಶಿ ಪರ ವಕೀಲರಿಗೆ ಅವಕಾಶ ಸಿಗಲಿಲ್ಲ. ಸಚಿವ ಡಿ.ಕೆ ಶಿವಕುಮಾರ್ ಹಾಗೂ ಇತರೆ ಆರೋಪಿಗಳಾದ ರಾಜೇಂದ್ರ, ಆಂಜನೇಯ, ಸುನೀಲ್ ಶರ್ಮಾ ಅವರ ಖುದ್ದು ಹಾಜರಿಯನ್ನು ದಾಖಲಿಸಿಕೊಂಡ ನ್ಯಾಯಾಲಯ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.