ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಜನಾರ್ದನ ರೆಡ್ಡಿ, ಅಲಿಖಾನ್, ನಾಗೇಂದ್ರ ಹಾಗೂ ಸುರೇಶ್ ಬಾಬು ಇಂದು ಹಾಜರಾಗಿದ್ರು. ಆದ್ರೆ ಆನಂದ್ ಸಿಂಗ್ ವಿಚಾರಣೆಗೆ ಹಾಜರಾಗದೆ ಗೈರಾಗಿರುವುದು ಕಂಡುಬಂತು.
ವಿಚಾರಣೆಗೆ ವಿನಾಯಿತಿ ನೀಡುವಂತೆ ಆನಂದ್ ಸಿಂಗ್ ಪರ ವಕೀಲರು ನ್ಯಾಯಲಯಕ್ಕೆ ಮನವಿ ಮಾಡಿದ್ರು. ಕಂಪ್ಲಿ ಶಾಸಕ ಗಣೇಶ್, ಆನಂದ್ ಸಿಂಗ್ ಮೇಲೆ ಈಗಲ್ ಟನ್ ರೆಸಾರ್ಟಲ್ಲಿ ಹಲ್ಲೆ ಮಾಡಿದ್ದಾರೆ. ಇನ್ನು ಹಲವು ತಿಂಗಳು ಚಿಕಿತ್ಸೆ ಅವಶ್ಯಕತೆ ಇದ್ದು, ಆಸ್ಪತ್ರೆಯಲ್ಲಿಯೇ ಇದ್ದಾರೆ ಎಂದು ಆನಂದ್ ಸಿಂಗ್ ಚಿಕಿತ್ಸೆ ಪಡೆಯುತ್ತಿರುವ ಕುರಿತು ವಕೀಲರು ವೈದ್ಯಕೀಯ ದಾಖಲೆಗಳನ್ನ ಸಲ್ಲಿಕೆ ಮಾಡಿದ್ರು. ಹೀಗಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಲು ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ರು. ಈ ವೇಳೆ ನ್ಯಾಯಲಯ ಹಲ್ಲೆಗೂ ಮುನ್ನ ಯಾಕೆ ವಿಚಾರಣೆಗೆ ಹಾಜರಾಗಿಲ್ಲವೆಂದು ಪ್ರಶ್ನೆ ಮಾಡಿ, ಮತ್ತೆ ವಿಚಾರಣೆ ನಡೆಸುವುದಾಗಿ ಹೇಳಿ ವಿಚಾರಣೆ ಮುಂದೂಡಿಕೆ ಮಾಡಿದೆ.
ಬಳ್ಳಾರಿಯಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ಅರೋಪ ಪ್ರಕರಣದಲ್ಲಿ ಜನಾರ್ದನ ರೆಡ್ಡಿ, ಅಲಿಖಾನ್, ಆನಂದ್ ಸಿಂಗ್ ಆರೋಪಿಯಾಗಿದ್ದು, ಈ ಸಂಬಂಧ ಲೋಕಾಯುಕ್ತ ಎಸ್ಐಟಿ 2013ರಲ್ಲಿ ಎಫ್ಐಆರ್ ದಾಖಲಿಸಿ, ತನಿಖೆ ಕೈಗೊಂಡಿತ್ತು. ನಂತ್ರ ನ್ಯಾಯಲಯ ವಿಚಾರಣೆಗೆ ಹಾಜಾರಾಗುವಂತೆ ನೋಟಿಸ್ ಜಾರಿ ಮಾಡಿತ್ತು.