ಬೆಂಗಳೂರು: ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ನಾನು ಹೇಳಿಲ್ಲ. ನಾನು ಹೇಳಿದ್ದು, ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಈ ಮೂಲಕ ಬೆಳಗ್ಗೆ ನೀಡಿದ್ದ ಹೇಳಿಕೆಯಿಂದ ಉಲ್ಟಾ ಹೊಡೆದ್ದಾರೆ.
ಈ ಮೊದಲು ಮಾತನಾಡಿದ್ದ ಮಾಜಿ ಪ್ರಧಾನಿ ದೇವೇಗೌಡ, ಸರ್ಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ. ಅದು ಎರಡೂ ಪಕ್ಷದ ಮೇಲೆ ನಿಂತಿದೆ ಎಂದು ಹೇಳಿದ್ದರು. ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಯೋಗಾಸನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರ ಕೈಯಲ್ಲಿ ಎಲ್ಲವೂ ಇದೆ. ಮಧ್ಯಂತರ ಚುನಾವಣೆ ನಡೆಯೋ ಬಗ್ಗೆ ಸಂಶಯವೇ ಇಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದರು.
ಆದರೆ, ಈ ಮಾತಿಗೆ ಭಾರಿ ಪ್ರತಿಕ್ರಿಯೆಗಳು ಬರಲು ಆರಂಭವಾಗುತ್ತಿದ್ದಂತೆ, ಯೂ ಟರ್ನ್ ಹೊಡೆದಿರುವ ದೊಡ್ಡ ಗೌಡರು, ಇಲ್ಲ ಇಲ್ಲ ನಾನು ಮಾತನಾಡಿದ್ದು ವಿಧಾನಸಭೆ ಎಲೆಕ್ಷನ್ ಬಗ್ಗೆ ಅಲ್ಲ, ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಅಷ್ಟೇ , ಪಕ್ಷ ಬಲವರ್ದನೆಯೇ ನಮ್ಮ ಗುರಿ, ನಾನು ಪಕ್ಷ ಕಟ್ಟುತ್ತೇನೆ. ಕುಮಾರಸ್ವಾಮಿ ಸರ್ಕಾರ ನಾಲ್ಕು ವರ್ಷ ಆಡಳಿತದಲ್ಲಿರುತ್ತೆ. ಈ ಬಗ್ಗೆ ಕಾಂಗ್ರೆಸ್- ಜೆಡಿಎಸ್ ನಡುವಣೆ ಒಪ್ಪಂದವಾಗಿದೆ. ಅವಧಿ ಪೂರ್ಣಗೊಳಿಸುತ್ತದೆ ಎಂದು ಸ್ಪಷ್ಟಪಡಿಸಿದರು.