ಬೆಂಗಳೂರು: ಸರ್ಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ. ಅದು ಎರಡೂ ಪಕ್ಷದ ಮೇಲೆ ನಿಂತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾರ್ಮಿಕವಾಗಿ ನುಡಿದಿದ್ದಾರೆ.
ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಯೋಗಾಸನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರ ಕೈಯಲ್ಲಿ ಎಲ್ಲವೂ ಇದೆ. ಮಧ್ಯಂತರ ಚುನಾವಣೆ ನಡೆಯೋ ಬಗ್ಗೆ ಸಂಶಯವೇ ಇಲ್ಲ ಎಂದು ಹೊಸ ಬಾಂಬ್ ಸಿಡಿಸಿದರು. ರಾಜಕಾರಣದಲ್ಲಿ ಅನೇಕ ಏಳು ಬೀಳು ಇರುತ್ತದೆ. ನನ್ನ ಜೊತೆಯಲ್ಲೇ ಇದ್ದು, ನನ್ನ ಜೊತೆಯಲ್ಲೇ ಬೆಳೆದವರು ನನ್ನನ್ನು ಬಿಟ್ಟು ಹೋದ್ರು. ನಾನು ಧೃತಿಗೆಡದೇ ಮುಂದೆ ಬಂದಿದ್ದೇನೆ ಎಂದು ಹೇಳಿದರು.
ಮೈತ್ರಿ ಸರ್ಕಾರ ಮಾಡಲೇಬೇಕು ಅಂತ ನಂಗೇನು ಆಸೆ ಇರಲಿಲ್ಲ. ದೆಹಲಿ ನಾಯಕರು ಬಂದು ನಿಮ್ಮ ಮಗನನ್ನು ಮುಖ್ಯಮಂತ್ರಿ ಮಾಡ್ಬೇಕು. ಸಾರ್ವತ್ರಿಕ ಚುನಾವಣೆ ನಂತರ ಹೈಕಮಾಂಡ್ ಸ್ವಲ್ಪ ಶಕ್ತಿ ಕಳೆದುಕೊಂಡಿದೆ. ಯಡಿಯೂರಪ್ಪ ಸಿಎಂ ಆಗಬಾರದು ಅಂತ ಕಾಂಗ್ರೆಸ್ನವರು ಓಡಿ ಬಂದರು. ಚರ್ಚೆ ಮಾಡದೇ ಸರ್ಕಾರ ರಚನೆಗೆ ಮುಂದಾದ್ರು. ಕುಮಾರಸ್ವಾಮಿ ಅವರನ್ನೇ ಸಿಎಂ ಮಾಡಿ ಎಂದ್ರು. ಈಗ ಎಲ್ಲವನ್ನೂ ಸಹಿಸಿಕೊಂಡು ಹೋಗ್ತಿದ್ದೇವೆ ಎಂದು ಹೇಳಿದರು.
ಹಾಲಿ ಸಂಸದರಿರುವ ಕ್ಷೇತ್ರ ನಮಗೆ ಬೇಡ ಎಂದಿದ್ದೆ. ತುಮಕೂರು ಕ್ಷೇತ್ರವನ್ನು ನಾವು ಕೇಳಲೇ ಇಲ್ಲ. ಕಾಂಗ್ರೆಸ್ ಸೋತಿರುವ ಕ್ಷೇತ್ರವನ್ನೇ ಕೊಡಿ ಎಂದಿದ್ದೆ. ಮೈಸೂರಿಗೋಸ್ಕರ ತುಮಕೂರು ಕ್ಷೇತ್ರ ಕೊಟ್ಟರು ಎಂದು ಕಾಂಗ್ರೆಸ್ ವಿರುದ್ಧ ದೇವೇಗೌಡರು ಅಸಮಾಧಾನ ಹೊರಹಾಕಿದರು.