ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯಲ್ಲಿರುವ ಸುಮಾರು 76 ಎಕರೆ ವಿಸ್ತೀರ್ಣ ಹೊಂದಿರುವ ಸಮೇತನಹಳ್ಳಿ ಕೆರೆಯಲ್ಲಿ ನೊರೆ ಎದ್ದು ಕಾಣುತ್ತಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ.
ನೂರಾರು ಎಕರೆ ಕೃಷಿ ಭೂಮಿಗೆ ನೀರನ್ನು ಒದಗಿಸುತ್ತಿದ್ದ ಈ ಕೆರೆ ರೈತರ ಜೀವನಾಡಿಯಾಗಿದೆ. ಆದ್ರೆ ಈಗ ಕೆರೆಯ ನೀರು ನೊರೆಯಿಂದ ತುಂಬಿ ತುಳುಕುತ್ತಿದ್ದು, ಪೂರ್ತಿ ಕೆರೆ ತ್ಯಾಜ್ಯದ ವಾಸನೆಯಿಂದ ಕೂಡಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಉಪಯೋಗಕ್ಕೆ ಬರದಂತಾದ ನೀರು :
ಸುಮಾರು 57 ವರ್ಷಗಳಿಂದ ವರ್ತೂರು ಕೆರೆಯಲ್ಲಿ ನೀರಿದ್ದು, ಕಳೆದ 15 ದಿನಗಳಿಂದ ಕೆರೆಯಲ್ಲಿ ನೊರೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಇಷ್ಟು ವರ್ಷಗಳಿಂದ ಈ ಕೆರೆ ನೀರನ್ನು ನಂಬಿ ಕೃಷಿ ಜೀವನ ನಡೆಸುತ್ತಿದ್ದ ರೈತರು ಹಾಗು ಜಾನುವಾರುಗಳು ನೊರೆಯಿಂದ ತೊಂದರೆ ಅನುಭವಿಸುವಂತಾಗಿದೆ. ನೊರೆ ಕಾರಣ ನೀರು ಕೃಷಿ ಮತ್ತು ದನಕರುಗಳ ಉಪಯೋಗಕ್ಕೆ ಬರದಂತಾಗಿದ್ದು, ಜನ-ಜಾನುವಾರಗಳು ರೋಗಗಳಿಗೆ ತುತ್ತಾಗುವಂತಾಗಿದೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.
ಶುದ್ದೀಕರಿಸಿ ಒಳ್ಳೆಯ ನೀರು ಹರಿಸಿ :
ಈ ಕೆರೆಯ ಕೂಗಳತೆ ದೂರದಲ್ಲಿ ವರ್ತೂರು ಕೆರೆಯ ಕೋಡಿ ನೀರು ಕಾಲುವೆ ಮುಖಾಂತರ ಹರಿಯುತ್ತಿದ್ದು, ಈ ಕಾಲುವೆಯಲ್ಲಿ ಸಹ ನೊರೆ ಹೆಚ್ಚಾಗಿದೆ. ಆದರೆ ಈ ಕಾಲುವೆ ಮುಖಾಂತರವೇ ಸರ್ಕಾರ 57 ವರ್ಷಗಳಿಂದ ಏತ ನೀರಾವರಿ ಮಾಡಿ ಸಮೇತನಹಳ್ಳಿ ಕೆರೆಗೆ ನೀರು ಹರಿಸುತ್ತಿದೆ. ಈ ಕಾಲುವೆಯ ನೀರನ್ನು ಸಮೇತನಹಳ್ಳಿ ಬಳಿಯ ಒಂದು ಬಾವಿಯ ಮುಖಾಂತರ ಸಂಗ್ರಹ ಮಾಡಿ, ನಂತರ ಪೈಪ್‌ಗಳ ಮೂಲಕ ಸಮೇತನಹಳ್ಳಿ ಕೆರೆಗೆ ಹರಿಸುತ್ತಿದ್ದಾರೆ. ಆದರೆ ಸಣ್ಣ ನೀರಾವರಿ ಇಲಾಖೆಯವರು ಒಂದು ಶುದ್ದೀಕರಣ ಯಂತ್ರವನ್ನು ಅಳವಡಿಸಿ ನೀರು ಶುದ್ದೀಕರಿಸಿ ಒಳ್ಳೆಯ ನೀರು ಹರಿಸಿದರೆ ತೊಂದರೆಯನ್ನು ತಪ್ಪಿಸಬಹುದಾಗಿದೆ.
ಇನ್ನು ಈ ಕೆರೆ ನೀರಿನಿಂದಲೇ ಈ ಭಾಗದ ರೈತರು ತರಕಾರಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆದು ತಿನ್ನುತ್ತಿದ್ದು, ಇದನ್ನೇ ನಂಬಿ ಕೆಲವು ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಆದರೆ ಈಗ ಕಾಣಿಸಿಕೊಂಡ ನೊರೆ ನೀರಿನಿಂದ ಬೆಳೆ ಸಮೃದ್ಧಿಯಾಗಿ ಬರುವುದಿಲ್ಲ, ಜತೆಗೆ ಬೆಳೆದ ಬೆಳೆಯನ್ನು ಸಹ ತಿನ್ನಲು ಯಾರು ಮುಂದೆ ಬರುವುದಿಲ್ಲ. ಹೀಗೆ ಮುಂದುವರಿದರೆ ಈ ಭಾಗದ ರೈತರು ಕೃಷಿಯಿಂದ ದೂರ ಸರಿಯಬೇಕಾದ ಪರಿಸ್ಥಿತಿ ಎದುರಾಗಲಿದೆ.