ಬೆಂಗಳೂರು: ಓಲಾ ಕ್ಯಾಬ್ ಚಾಲಕನೋರ್ವ ಯುವತಿಗೆ ಕೊಲೆ ಬೆದರಿಕೆ ಹಾಕಿರುವ ವಿಷಯ ಬೆಳಕಿಗೆ ಬಂದಿದ್ದು, ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪ್ರಕರಣವೇನು?
ಕಳೆದ ಸೋಮವಾರ ಯುವತಿಯ ತಂದೆ ಮಗಳಿಗಾಗಿ ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ನಾಗವಾರದ ಬಳಿಯೇ ಕ್ಯಾಬ್ ನಿಲ್ಲಿಸಿದ ಚಾಲಕ ಮೊಹಮ್ಮದ್ ಅಜರುದ್ದೀನ್, ಇನ್ನೂ ಹೆಚ್ಚು ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾನೆ. ನನ್ನ ತಂದೆ ಕೊಡಬೇಕಾದ ಹಣ ಕೊಟ್ಟಿದ್ದಾರೆ, ಈಗ ಹೆಚ್ಚುವರಿ ಹಣ ಕೇಳಿದರೆ ಕೊಡಲು ಆಗುವುದಿಲ್ಲ ಎಂದು ಹೇಳಿದ ಆಕೆ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಈ ವೇಳೆ ಯುವತಿಯ ತಂದೆಗೆ ಅವಾಚ್ಯ ಶಬ್ಧದಿಂದ ನಿಂದಿಸಿದ ಚಾಲಕ, ನಿನ್ನ ಮಗಳನ್ನ ಎಲ್ಲಿಯಾದರೂ ದೂರ ಬಿಟ್ಟು ಹೋಗುತ್ತೇನೆ ಎಂದು ಕೈಯಲ್ಲಿದ್ದ ಫೋನ್ ಕಿತ್ತುಕೊಂಡು ಪ್ರಾಣಬೆದರಿಕೆ ಹಾಕಿದ್ದಾನೆ. ಈ ವೇಳೆ ಯುವತಿ ಕಿರುಚಾಡಿದಾಗ ನಿನ್ನ ಅಡ್ರೆಸ್ ಗೊತ್ತು ನಂಗೆ, ನಿನ್ನ ಕತ್ತರಿಸಿ ಹಾಕ್ತೀನಿ ಎಂದು ಧಮಕಿ ಹಾಕಿ ಚಾಲಕ ಪರಾರಿಯಾಗಿದ್ದ.
ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ಓಲಾ ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.