ಬೆಂಗಳೂರು: ರಾಜ್ಯದಲ್ಲಿ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ನಿನ್ನೆಯಷ್ಟೇ ಮೈಸೂರಿನ ಎಚ್.ಡಿ ಕೋಟೆಯಲ್ಲಿ ಕಾರ್ಮಿಕನೊಬ್ಬನನ್ನು ಕಾಡಾನೆ ಹೊಸಕಿ ಹಾಕಿರುವುದು ಮಾನವ-ಪ್ರಾಣಿ ಸಂಘರ್ಷದ ಕರಾಳತೆಗೆ ಹಿಡಿದ ಕೈಗನ್ನಡಿ. ರಾಜ್ಯದಲ್ಲಿ ಮಾನವ-ಪ್ರಾಣಿ ಸಂಘರ್ಷದ ಕರಾಳತೆ ಹೇಗಿದೆ ಎಂಬುದರ ಚಿತ್ರಣ ಇಲ್ಲಿದೆ ನೋಡಿ.
ರಾಜ್ಯದಲ್ಲಿ ಮಾನವ-ಪ್ರಾಣಿ ಸಂಘರ್ಷದ ತೀವ್ರತೆ ವರ್ಷಂಪ್ರತಿ ಏರಿಕೆ ಕಾಣುತ್ತಲೇ ಇದೆ. ಪ್ರತಿ ವರ್ಷ ರಾಜ್ಯದಲ್ಲಿ ಸರಾಸರಿ 40 ಮಂದಿ ಕಾಡು ಪ್ರಾಣಿಗಳಿಗೆ ಬಲಿಯಾಗುತ್ತಿದ್ದಾರೆ. ಅಂದರೆ, ಪ್ರತಿ ತಿಂಗಳು ಸರಾಸರಿ ಲೆಕ್ಕದಲ್ಲಿ 4 ಮಂದಿಯಂತೆ ಕಾಡು ಪ್ರಾಣಿಗಳಿಗೆ ಪ್ರಾಣ ತೆತ್ತುತ್ತಿದ್ದಾರೆ. ಪ್ರಾಣ ಹಾನಿಯ ಜತೆಗೆ ಕಾಡು ಪ್ರಾಣಿಗಳ ಬೆಳೆ ಹಾನಿ ಪ್ರಕರಣಗಳು ವರ್ಷಂಪ್ರತಿ ಹೆಚ್ಚುತ್ತಲೇ ಇದೆ. ಅರಣ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಕಾಡು ಪ್ರಾಣಿಗಳ ಜತೆಗಿನ ಸಂಘರ್ಷ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.
ಸಾಮಾನ್ಯವಾಗಿ ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ಪ್ರಾಣ ಹಾನಿಗಳು ಸಂಭವಿಸುತ್ತಿತ್ತು. ಈಗ ಬಳ್ಳಾರಿ, ಬೆಳಗಾವಿ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗದಲ್ಲೂ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳ ಹೆಚ್ಚಾಗಿ ವರದಿಯಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಕಳೆದ 5 ವರ್ಷಗಳಲ್ಲಿ ಸುಮಾರು 230 ಜನ ಸಾವನ್ನಪ್ಪಿದ್ದಾರೆ. ಈ ಪೈಕಿ ಕಾಡಾನೆಗಳಿಗೆ ಬಲಿಯಾಗಿರುವವರ ಸಂಖ್ಯೆ ಅತಿ ಹೆಚ್ಚಿದ್ದರೆ, ನಂತರದ ಸ್ಥಾನಗಳಲ್ಲಿ ಹುಲಿ, ಕರಡಿ, ಚಿರತೆ, ಮೊಸಳೆ ದಾಳಿಗೆ ಮನಷ್ಯರು ಹೆಚ್ಚಾಗಿ ಬಲಿಯಾಗಿದ್ದಾರೆ. ಕಾಡು ಪ್ರಾಣಿಗೆ ಬಲಿಯಾದ ಕುಟುಂಬಗಳಿಗೆ ಸುಮಾರು 15 ಕೋಟಿ ರೂ. ಗೂ ಹೆಚ್ಚು ಪರಿಹಾರವನ್ನು ವಿತರಿಸಲಾಗಿದೆ.
ಕಾಡು ಪ್ರಾಣಿಗಳಿಗೆ ಬಲಿಯಾದವರೆಷ್ಟು?:
ಅರಣ್ಯ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ 2015-16ರಲ್ಲಿ ರಾಜ್ಯದಲ್ಲಿ 45 ಮಂದಿ ಕಾಡು ಪ್ರಾಣಿಗಳಿಗೆ ಬಲಿಯಾಗಿದ್ದಾರೆ. 2016-17ರಲ್ಲಿ ಕಾಡು ಪ್ರಾಣಿಗಳ ಜತೆಗಿನ ಸಂಘರ್ಷಕ್ಕೆ ಬಲಿಯಾದವರ ಸಂಖ್ಯೆ 48ಕ್ಕೆ ಏರಿಕೆಯಾಗಿತ್ತು. ಇನ್ನು 2017-18ಕ್ಕೆ ಕಾಡು ಪ್ರಾಣಿಗಳ ದಾಳಿಗೆ 38 ಮಂದಿ ಸಾವು ಗೀಡಾಗಿದ್ದರು. 2018-19 ರಲ್ಲೂ ಕಾಡು ಪ್ರಾಣಿಗಳ ಜತೆಗಿನ ಸಂಘರ್ಷ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ. ಈವರೆಗೆ ಕಲೆ ಹಾಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಸುಮಾರು 45 ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಕುರಿತು ವರದಿಯಾಗಿವೆ. ಈ ಸಂಬಂಧ ಅರಣ್ಯ ಇಲಾಖೆ ಪ್ರತಿ ಉಪವಿಭಾಗಗಳಿಂದ ಮಾಹಿತಿ ಕಲೆ ಹಾಕುತ್ತಿದೆ.
ಕಾಡು ಪ್ರಾಣಿಗಳಿಂದಾಗಿರುವ ಬೆಳೆ ಹಾನಿ ಎಷ್ಟು?:
ಇತ್ತ ಕಾಡು ಪ್ರಾಣಿಗಳಿಂದ ಅದರಲ್ಲೂ ಕಾಡಾನೆಗಳ ದಂಡಿನಿಂದ ರಾಜ್ಯದಲ್ಲಿ ಬೆಳೆ ಹಾನಿ ಪ್ರಕರಣಗಳೂ ಹೆಚ್ಚುತ್ತಲೇ ಇದೆ. 2015-16ರಲ್ಲಿ ರಾಜ್ಯದಲ್ಲಿ ಸುಮಾರು 21,150 ಬೆಳೆ ಹಾನಿ ಪ್ರಕರಣಗಳು ವರದಿಯಾಗಿವೆ. 2016-17ರಲ್ಲಿ ರಾಜ್ಯದ ವಿವಿಧೆಡೆ ಒಟ್ಟು 18,985 ಬೆಳೆ ಹಾನಿ ಪ್ರಕರಣಗಳು ದಾಖಲಾಗಿವೆ. 2017-18ರಲ್ಲಿ ರಾಜ್ಯದಲ್ಲಿ ಕಾಡು ಪ್ರಾಣಿಗಳ ದಾಳಿಗಳಿಂದ ಸುಮಾರು 27,525 ಬೆಳೆ ಹಾನಿ ಪ್ರಕರಣಗಳು ವರದಿಯಾಗಿವೆ. 2018-19ರಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು 25 ಸಾವಿರಕ್ಕೂ ಹೆಚ್ಚು ಬೆಳೆ ಹಾನಿ ಪ್ರಕರಣಗಳು ವರದಿಯಾಗಿವೆ.