ಬೆಂಗಳೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀಡಲಾಗುವ ₹ 2 ಕೋಟಿ ಮೊತ್ತದ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸದ ಶಾಸಕರುಗಳಿಗೆ ಸಿಎಂ ಕುಮಾರಸ್ವಾಮಿ ಪತ್ರ ಬರೆದಿದ್ದು, ಜಿಲ್ಲಾಧಿಕಾರಿಗಳಿಗೆ ತುರ್ತಾಗಿ ಕಾಮಗಾರಿ ಪ್ರಸ್ತಾವನೆ ಸಲ್ಲಿಸುವಂತೆ ಕೋರಿದ್ದಾರೆ.
ಕಳೆದ ವಾರ ಸಿಎಂ ಬರೆದ ಪತ್ರದಲ್ಲಿ 2018-19 ಸಾಲಿನ ಕ್ರಿಯಾ ಯೋಜನೆ ಮಾಹಿತಿಯಂತೆ 31 ಶಾಸಕರು ಹಾಗೂ 36 ವಿಧಾನ ಪರಿಷತ್ ಸದಸ್ಯರು ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸದೆ ಇರುವುದು ಕಂಡು ಬಂದಿತ್ತು. ಜತೆಗೆ ಸಂಪೂರ್ಣ ₹ 2 ಕೋಟಿ ಮೊತ್ತದ ಕಾಮಗಾರಿಗಳ ಪ್ರಸ್ತಾವನೆ ಸಹ ಆಗಿರಲಿಲ್ಲ. ಹೀಗಾಗಿ, ರಾಜ್ಯದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಕುಂಠಿತವಾಗಿದೆ ಎಂದು ತಿಳಿಸಿದ್ದರು.
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ ಎರಡು ಕೋಟಿ ರೂ. ನೀಡಲಾಗುತ್ತಿದೆ. ಈ ಮೊತ್ತಕ್ಕೆ ಆರ್ಥಿಕ ಸಾಲಿನ ಪ್ರಾರಂಭದಲ್ಲಿಯೇ ಕ್ರಿಯಾ ಯೋಜನೆಯನ್ನು ಸಲ್ಲಿಸಿ ಜೂನ್ ಅಂತ್ಯದೊಳಗೆ ಅಂತಿಮಗೊಳಿಸಿ, ಅನುಮೋದನೆ ಪಡೆದು ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕಾಗಿರುತ್ತದೆ ಎಂದು ವಿವರಿಸಿದ್ದಾರೆ.
ಯೋಜನೆ ಪ್ರಗತಿಯನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸುವ ಸಂಬಂಧ 2018-19ನೇ ಸಾಲಿನಲ್ಲಿ ಶಾಸಕರುಗಳು ನೀಡುವ ಪ್ರಸ್ತಾವನೆಯನ್ನು ಹಾಗೂ ಹಿಂದೆ ನೀಡಿದ ಕಾಮಗಾರಿಗಳ ವಸ್ತುಸ್ಥಿತಿ ಸಂಬಂಧಿಸಿದಂತೆ ವರ್ಕ್ ಸಾಫ್ಟ್ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಅದರಲ್ಲಿ ದಾಖಲು ಮಾಡಿರುವ ಮಾಹಿತಿಯಂತೆ 67 ಶಾಸಕರು ಕಾಮಗಾರಿ ಪ್ರಸ್ತಾವನೆ ಸಲ್ಲಿಸಿಲ್ಲ.
ಶಾಸಕರು ವೈಯಕ್ತಿಕವಾಗಿ ಈ ಬಗ್ಗೆ ಗಮನ ಹರಿಸಿ 2018-19ನೇ ಸಾಲಿಗೆ ಸಂಬಂಧಿಸಿದಂತೆ ಉಳಿದ ಮೊತ್ತಕ್ಕೆ ಹಾಗೂ 2019-20ನೇ ಸಾಲಿಗೆ ಸಂಬಂಧಿಸಿದಂತೆ 2 ಕೋಟಿ ರೂ. ಕಾಮಗಾರಿಗಳ ಪ್ರಸ್ತಾವನೆಯನ್ನು ಶೀಘ್ರ ಜಿಲ್ಲಾಧಿಕಾರಿಗಳಿಗೆ ನೀಡುವಂತೆ ಸಿಎಂ ಮನವಿ ಮಾಡಿದ್ದಾರೆ.
ಪ್ರಸ್ತಾವನೆ ಸಲ್ಲಿಸಲು ನಿರಾಸಕ್ತಿ:
ಚನ್ನಪಟ್ಟಣ ಕ್ಷೇತ್ರದ ಶಾಸಕ/ ಸಿಎಂ ಕುಮಾರಸ್ವಾಮಿ ಅವರು 2018-19ರ ಸಾಲಿಗೆ ಸಂಬಂಧಿಸಿದಂತೆ 80.50 ಲಕ್ಷ ರೂ. ಮೊತ್ತದ 6 ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಸುಮಾರು 1.19 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸದೇ ಬಾಕಿ ಉಳಿಸಿಕೊಂಡಿದ್ದಾರೆ. ಇತ್ತ ಬಾದಾಮಿ ಕ್ಷೇತ್ರದ ಶಾಸಕ/ ಮಾಜಿ ಸಿಎಂ ಸಿದ್ದರಾಮಯ್ಯ ಅವರು 22 ಲಕ್ಷ ರೂ. ವೆಚ್ಚದ 5 ಕಾಮಗಾರಿಗಳಿಗಷ್ಟೇ ಪ್ರಸ್ತಾವನೆ ಸಲ್ಲಿಸಿದ್ದು, ಇನ್ನೂ 1.78 ಕೋಟಿ ರೂ. ಬಾಕಿ ಉಳಿದುಕೊಂಡಿದೆ. ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಅವರು ಕೇವಲ 15 ಲಕ್ಷ ರೂ. ಮೊತ್ತದ ಎರಡು ಕಾಮಗಾರಿಗಳಿಗೆ ಹಾಗೂ ಕೊರಟಗೆರೆ ಶಾಸಕ/ ಡಿಸಿಎಂ ಪರಮೇಶ್ವರ್ ಅವರು 42 ಲಕ್ಷ ರೂ. ಅಂದಾಜು ಮೊತ್ತದ 9 ಕಾಮಗಾರಿಗಳಿಗಷ್ಟೇ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಉಳಿದಂತೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಕಂಪ್ಲಿ ಶಾಸಕ ಗಣೇಶ್, ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಹೆಬ್ಬಾಳ ಶಾಸಕ ಭೈರತಿ ಸುರೇಶ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಕರ್, ಕೆ.ಆರ್.ಪುರಂ ಶಾಸಕ ಭೈರತಿ ಬಸವ ರಾಜ್ ಸೇರಿದಂತೆ 67 ಶಾಸಕರು ಯಾವುದೇ ಕಾಮಗಾರಿ ಪ್ರಸ್ತಾವನೆ ಸಲ್ಲಿಸಿಲ್ಲ. ಈ ಶಾಸಕರುಗಳ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀಡುವ ಎರಡು ಕೋಟಿ ರೂ. ಬಳಕೆಯಾಗದೆ ಹಾಗೆ ಕೊಳೆಯುತ್ತಿದೆ.
ಸಂಪೂರ್ಣ ಪ್ರಸ್ತಾವನೆ ಸಲ್ಲಿಸಿದ ಶಾಸಕರು:
ಶಿಕಾರಿಪುರ ಶಾಸಕ / ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸಂಪೂರ್ಣ ಎರಡು ಕೋಟಿ ರೂ.ಗೆ ಕಾಮಗಾರಿ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಹುಣಸೂರು ಶಾಸಕ ಎಚ್.ವಿಶ್ವನಾಥ್, ಬಳ್ಳಾರಿ ನಗರ, ಅಥಣಿ, ರಾಮದುರ್ಗ, ಬೊಮ್ಮನಹಳ್ಳಿ, ಚಿಕ್ಕಬಳ್ಳಾಪುರ, ಮಾಯಾಕೊಂಡ, ಬ್ಯಾಡಗಿ, ಮಡಿಕೇರಿ, ವಿರಾಜಪೇಟೆ, ಕೋಲಾರ, ಕನಕಗಿರಿ, ನಂಜನಗೂಡು, ಗುರುಮಿಟ್ಕಲ್ ಕ್ಷೇತ್ರಗಳ ಶಾಸಕರು ಸಂಪೂರ್ಣ ಎರಡು ಕೋಟಿ ರೂ.ಗೆ ಕಾಮಗಾರಿಗಳ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.