ಬೆಂಗಳೂರು: ಜನೌಷಧ ವ್ಯಾಪ್ತಿಗೆ ಕ್ಯಾನ್ಸರ್ ಔಷಧಿಗಳನ್ನೂ ತರಲಾಗುತ್ತದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು,
ರಸಗೊಬ್ಬರ ಖಾತೆಯನ್ನು ದಿವಗಂತ ಅನಂತ್ ಕುಮಾರ್ ಯಶಸ್ವಿಯಾಗಿ ನಿಭಾಯಿಸಿದ್ದಾರೆ, ಅವರ ನಿಧನದ ಬಳಿಕ ಕ್ಯಾನ್ಸರ್‌ಗೆ ಒಳಪಟ್ಟ ಔಷಧಿಗಳನ್ನು ಜನೌಷಧಿ ವ್ಯಾಪ್ತಿಗೆ ತರುತ್ತಿದ್ದೇವೆ. ಈಗಾಗಲೇ ಕೆಲ ಔಷಧಗಳನ್ನು ತರಲಾಗಿದ್ದು, ಎಲ್ಲವನ್ನೂ ಜನೌಷಧಿ ವ್ಯಾಪ್ತಿಗೆ ತರುತ್ತೇವೆ. ಜೊತೆಗೆ ಕರ್ನಾಟಕದ ಜನೌಷಧಿ ಕೇಂದ್ರಗಳಿಗೆ ಔಷಧಿ ಪೂರೈಸಲು ಪ್ರತ್ಯೇಕ ಕೇಂದ್ರವನ್ನೇ ಸ್ಥಾಪನೆ ಮಾಡುತ್ತೇವೆ ಎಂದರು.
ರಸಗೊಬ್ಬರ ಕೊರತೆ ನೀಗಿಸಲು ಅನಂತ್ ಕುಮಾರ್ ಸಾಕಷ್ಟು ಕೆಲಸ ಮಾಡಿದ್ದಾರೆ, ಅದನ್ನೇ ನಾವು ಮುಂದುವರೆಸಿಕೊಂಡು ಹೋಗುತ್ತೇವೆ. ಕಾರ್ಖಾನೆಗಳಿಗೆ ಸಬ್ಸಿಡಿ ಹಣ ನೀಡುವುದಿಲ್ಲ, ಬದಲಾಗಿ ರೈತರು ಗೊಬ್ಬರ ಬಳಸಿದ ಪ್ರಮಾಣಕ್ಕೆ ತಕ್ಕಂತೆ ಅವರಿಗೇ ಪಾವತಿ ಮಾಡುತ್ತೇವೆ ಎಂದರು. ಇದೇ ವೇಳೆ ಹಿಂದಿ ಭಾಷೆ ಹೇರಿಕೆ ಪ್ರಶ್ನೆಯೇ ಇಲ್ಲ, ಮೊದಲಿನಿಂದಲೂ ತ್ರಿಭಾಷಾ ಸೂತ್ರವನ್ನು ಪಾಲಿಸಲಾಗುತ್ತಾ ಬಂದಿದೆ, ಆದರೆ ಎಲ್ಲಿಯೂ ಬಲವಂತವಾಗಿ ಹೇರಿಕೆ ಮಾಡಿಲ್ಲ, ಈ ಬಗ್ಗೆ ಈಗಾಗಲೇ ಪ್ರಧಾನಿಗಳು ಸ್ಪಷ್ಟನೆ ನೀಡಿದ್ದಾರೆ ಎಂದರು.
ಕರ್ನಾಟಕದ ಮೇಲೆ ವಿಶ್ವಾಸವಿಟ್ಟು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ನಾಲ್ಕು ಸಂಸದರಿಗೆ ಸಚಿವ ಸ್ಥಾನ ನೀಡಿದ್ದಾರೆ. ಜನ ನಮ್ಮ ಮೇಲೆ ಇಟ್ಟ ವಿಶ್ವಾಸಕ್ಕೆ ಯಾವುದೇ ರೀತಿಯಲ್ಲಿ ಚ್ಯುತಿ ಬಾರದಂತೆ ನಾವು ಕೆಲಸ ಮಾಡಿ ತೋರಿಸುತ್ತೇವೆ. ಮೊನ್ನೆ ನಡೆದ ಪ್ರಥಮ ಸಚಿವ ಸಂಪುಟ ಸಭೆಯಲ್ಲಿ ರೈತರ ಬಗ್ಗೆ, ವರ್ತಕರ ಬಗ್ಗೆ ಹಾಗೂ ಗೋ ರಕ್ಷಣೆಯ ಬಗ್ಗೆ ಪ್ರಧಾನಿಯವರು ತೆಗೆದುಕೊಂಡ ನಿರ್ಧಾರಗಳು ಮುಂದೆ ಅವರು ಸಾಗಲು ದಿಕ್ಸೂಚಿಯಾಗಿವೆ. ಪ್ರಧಾನಿಯವರು 100 ದಿನದ ಕ್ರಿಯಾಯೋಜನೆ ಕೊಟ್ಟಿದ್ದಾರೆ, ನೂರು ದಿನಗಳಲ್ಲಿ ಯಾವೆಲ್ಲಾ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಬೇಕು ಎಂದು ಸಚಿವರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಶೇಷ ಅಂದರೆ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದೇ ಗಂಟೆಯೊಳಗಾಗಿ ಪ್ರಧಾನಿ ಕಾರ್ಯಾಲಯದಿಂದ ಈ ಆದೇಶ ನಮ್ಮ ಕೈ ಸೇರಿದೆ ಎಂದರು.
ಕರ್ನಾಟಕದಿಂದ ದೆಹಲಿಗೆ ಬರುವ ಜನರು ಮತ್ತು ಜನಪ್ರತಿನಿಧಿಗಳು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ದೆಹಲಿಯ ಗೃಹ ಕಚೇರಿಯಲ್ಲೇ ಒಂದು ಪ್ರತ್ಯೇಕ ಕಾರ್ಯಾಲಯವನ್ನು ಪ್ರಾರಂಭಿಸುತ್ತಿದ್ದೇವೆ. ಜತೆಗೆ ನಾವು ಪ್ರತಿ 15 ದಿನಗಳಿಗೊಮ್ಮೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕೂತು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ತೀರ್ಮಾನಿಸಿದ್ದೇವೆ. ಅಭಿವೃದ್ದಿ ವಿಷಯದಲ್ಲಿ ನಾವು ಎಂದೂ ರಾಜಕಾರಣ ಬೆರೆಸುವುದಿಲ್ಲ, ನಾವು ರಾಜ್ಯದ ಪರವಾಗಿದ್ದೇವೆ. ನಾವಾಗಿಯೇ ಮೈತ್ರಿ ಸರ್ಕಾರ ಬೀಳಿಸುವುದಿಲ್ಲ, ಅವರಾಗಿಯೇ ಸರ್ಕಾರ ಬೀಳಿಸಿಕೊಂಡರೆ ನಾವು ಹೊಣೆಯಲ್ಲ.
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ 24 ಗಂಟೆಗಳಲ್ಲಿ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದು ನಾನು ಭವಿಷ್ಯ ಹೇಳಿದ್ದು ನಿಜ, ಕುಮಾರಸ್ವಾಮಿ ರಾಜೀನಾಮೆಗೆ ಮುಂದಾಗಿದ್ದೂ ನಿಜ. ಆದರೆ ಬೇರೆಯವರು ಬಾಗಿಲು ಬಂದ್ ಮಾಡಿ ಅವರನ್ನು ಒಳಗೆ ಕೂರಿಸಿದ್ರು, ನಾನೇನು ಮಾಡಲಿ. ಭವಿಷ್ಯ ಕೇಳಿಕೊಂಡು ಬಂದು ಗೆಲ್ಲುತ್ತೇನೆ ಎಂದ ದೇವೇಗೌಡರೇ ಸೋತು ಹೋದರು, ಇನ್ನು ನಮ್ಮ ಭವಿಷ್ಯ ಹೇಗೆ ಸತ್ಯವಾಗುತ್ತದೆ ಎಂದು ವ್ಯಂಗ್ಯವಾಡಿದ ಅವರು, ರಾಜ್ಯದಲ್ಲಿ ಮತ್ತೆ ಸಿಂಗಲ್ ಲಾರ್ಜೆಸ್ಟ್ ಪಕ್ಷವಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.
ಹಿಂದೆ ಕುಮಾರಸ್ವಾಮಿ ಮಾಡಿದ ಗ್ರಾಮ ವಾಸ್ತವ್ಯ ಅವರಿಗೆ ಸರಿಯಾದ ಫಲ ಕೊಟ್ಟಿಲ್ಲ, ಅವರು ವಾಸ್ತವ್ಯ ಮಾಡಿದ್ದ ಹಳ್ಳಿಗಳೇ ಅವರಿಗೆ ತಿರುಗುಬಾಣವಾಗಿತ್ತು. ಹಾಗಾಗಿ ಈಗ ಶಾಲಾ ವಾಸ್ತವ್ಯ ಮಾಡಲು ಹೊರಟಿದ್ದಾರೆ. ಹುಡುಗರು ಶಾಲೆಗಳಿಗೆ ಗೊತ್ತಿಲ್ಲದನ್ನು ಕಲಿಯಲು ಹೋಗುತ್ತಾರೆ, ಈಗ ಕುಮಾರಸ್ವಾಮಿಯವರೂ ಸಹ ಶಾಲಾ ವಾಸ್ತವ್ಯದ ಮೂಲಕ ಕಲಿಯಲು ಹೊರಟಿದ್ದಾರೆ ಎಂದು ಟೀಕಿಸಿದರು.
ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ, ಆದರೆ ರಾಜ್ಯ ಸರ್ಕಾರ ಯೋಜನೆಯ ಡಿಪಿಎಆರ್ ಸಿದ್ದಗೊಳಿಸಿ ಕೇಂದ್ರಕ್ಕೆ ಕಳುಹಿಸಿದೆಯೇ ಅಂತ ಪ್ರಶ್ನಿಸಿದ ಸದಾನಂದಗೌಡ, ಸಬ್ ಅರ್ಬನ್ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಿದೆ. ಆದರೆ ರಾಜ್ಯ ಸರ್ಕಾರ ಪ್ಲ್ಯಾನ್ ಆಫ್ ಆ್ಯಕ್ಷನ್ ಈವರೆಗೂ ನೀಡಿಲ್ಲ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಯಾವಾಗಲೂ ಸಹಕಾರ ನೀಡುತ್ತೆ ಎಂದು ರಾಜ್ಯದ ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.