ಬೆಂಗಳೂರು: ಸಂವಿಧಾನಕ್ಕೆ ಆಗಾಗ ತಿದ್ದುಪಡಿಯ ಅಗತ್ಯ ಇದೆ. ಆದರೆ, ಸಂವಿಧಾನ ಮಾತ್ರ ಯಾವುದೇ ಕಾರಣಕ್ಕೂ ಬದಲಾಗಬಾರದು. ಸಂವಿಧಾನದ ಬದಲಾವಣೆಗೆ ಕೈ ಹಾಕಿದರೆ ದೇಶದಲ್ಲಿ ರಕ್ತಪಾತ ಆಗುತ್ತೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ನಗರದ ಶಾಂತಿನಗರ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಬಿಎಂಟಿಸಿ ಎಸ್ಸಿ, ಎಸ್ಟಿ ನೌಕರರ ಒಕ್ಕೂಟದಿಂದ ಡಾ. ಅಂಬೇಡ್ಕರ್ ಜಯಂತ್ಯುತ್ಸವ ಹಾಗೂ ಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ಡಿ ಸಿ ತಮ್ಮಣ್ಣ, ಶಾಸಕ ಹ್ಯಾರಿಸ್, ಬಿ ಟಿ ಲಲಿತಾ ನಾಯಕ್ ಸೇರಿದಂತೆ ಇತರರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಅಂಬೇಡ್ಕರ್ ಯಾವುದೇ ಜಾತಿಗೆ ಸೀಮಿತವಾದ ನಾಯಕರಲ್ಲ. ಅಂಬೇಡ್ಕರ್ ಅವರನ್ನ ಒಂದು ಜಾತಿಯಿಂದ ನೋಡುವವರು ಕೊಳಕು ಮನಸ್ಸಿನವರು ಎಂದು ಟೀಕಿಸಿದರು.
ಮೀಸಲಾತಿ ಬಗ್ಗೆ ಬಹಳ ಜನ ಈಗಲೂ ವಿರೋಧ ಮಾಡುತ್ತಾರೆ. ಯಾರ್ಯಾರು ವಿರೋಧ ಮಾಡುತ್ತಿದ್ದರು, ಅವರೇ ಈಗ ಮುಂದುವರಿದಿರೋರಿಗೆ ಶೇ. 10% ಮೀಸಲಾತಿ ಕೊಡ್ತಿದಾರೆ. ಸಂವಿಧಾನದಲ್ಲಿ ಯಾರಿಗೆ ಮೀಸಲಾತಿ ಕೊಡಬೇಕು, ಬೇಡ ಅನ್ನೋದನ್ನ ಅಂಬೇಡ್ಕರ್ ಹೇಳಿದ್ರು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಎಂದು ಅಂಬೇಡ್ಕರ್ ಹೇಳಿದರು. ಸಂವಿಧಾನವನ್ನ ಬದಲಾಯಿಸುವ ಕೆಲಸ ಮಾಡೋಕೆ ಹೊರಟಿದ್ದಾರೆ. ಕೆಲವರು ಸಂವಿಧಾನ ಬದಲಾವಣೆ ಮಾಡ್ಬೇಕು ಅಂತಾರೆ. ಯಾಕೆ ಹಾಗೆ ಹೇಳ್ತಿದ್ದಾರೆ ಅಂದ್ರೆ, ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶ ಕಲ್ಪಿಸಿದ್ದಾರೆ. ಇದೇ ಹೊಟ್ಟೆಕಿಚ್ಚು ಸಹಿಸಲಾಗದವರು ಈ ರೀತಿ ಸಂವಿಧಾನ ಬದಲಾವಣೆ ಮಾಡಬೇಕು ಅಂತಾರೆ ಎಂದು ವ್ಯಂಗ್ಯ ಮಾಡಿದರು.
ಸಂವಿಧಾನದಲ್ಲಿ ಜಾತೀಯತೆ ಇಲ್ಲ, ಅಸ್ಪೃಶ್ಯತೆ ಇಲ್ಲ. ಇದೆಲ್ಲಾ ಬೇಕು ಅನ್ನೋರು ಸಂವಿಧಾನ ಬದಲಾವಣೆ ಮಾಡಬೇಕು ಎಂದು ಹೇಳ್ತಾರೆ. ಇಂತಹ ಕೊಳಕು ಮನಸುಗಳು ಸಂವಿಧಾನ ಬದಲಾಯಿಸಬೇಕು ಅಂತಾರೆ ಎಂದು ಹೇಳಿದರು.
ಅನಂತ್ ಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ...
ಅನಂತ್ ಕುಮಾರ್ ಹೆಗಡೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಮಾಡಿದ ಸಿದ್ದರಾಮಯ್ಯ, ನಾನು ಇದನ್ನ ರಾಜಕೀಯಕ್ಕಾಗಿ ಹೇಳುತ್ತಿಲ್ಲ. ಅವನು ಅನಂತ್ ಕುಮಾರ್ ಹೆಗ್ಡೆ ಇದ್ದಾನಲ್ಲ, ಅವನು ಮಂತ್ರಿಯಾಗಿದ್ದ. ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಅವನು ಸಂವಿಧಾನ ಬದಲಾವಣೆ ಮಾಡಬೇಕು ಅಂತಾ ಹೇಳ್ತಾನೆ. ಇದು ಮೋದಿ ಅವರಿಗೆ ಗೊತ್ತಿಲ್ವಾ. ಮೋದಿ ಅವರೇ ಹೇಳಿಕೊಟ್ಟು ಮಾತನಾಡಿಸಿರಬೇಕು. ಈ ರೀತಿ ಹೇಳಿಕೆ ಕೊಟ್ಟಿದ್ದಾರೆ ಅಂತಾ ಗೊತ್ತಾದ ಮೇಲೂ ಮೋದಿ ಅವನ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಮಂತ್ರಿಗಿರಿ ಕೊಟ್ರು ಎಲ್ಲಾ ಮಾಡಿದ್ರು, ಇದೇನಾ ಬಾಬಾ ಸಾಹೇಬ್ರಿಗೆ ಕೊಡೋ ಗೌರವ ಎಂದು ಕಿಡಿಕಾರಿದರು.
ಜಾತಿ ಪ್ರಮಾಣಪತ್ರದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕುವಂತೆ ಮನವಿ...
ಜಾತಿ ಪ್ರಮಾಣಪತ್ರದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕುವಂತೆ ಮನವಿ ಬಂದ ಹಿನ್ನೆಲೆ, ಈ ವಿಚಾರವಾಗಿ ಸಿಎಂ ಕುಮಾರಸ್ವಾಮಿ ಜೊತೆ ಮಾತನಾಡುತ್ತೇನೆ. ಜಾತಿ ಪ್ರಮಾಣ ಪತ್ರದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕುವ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.