ಬೆಂಗಳೂರು: ಜಿಂದಾಲ್ ಕಂಪನಿಗೆ 3667 ಎಕರೆ ಭೂಮಿ ನೀಡುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಬಿಜೆಪಿ ರಾಜ್ಯ ಬಿಜೆಪಿ ಘಟಕ ಧರಣಿ ನಡೆಸುವ ಮುನ್ನವೇ ಬಿಜೆಪಿ ಯುವ ಮೋರ್ಚಾ ಜೂನ್ 11 ರಂದು ಪ್ರತಿಭಟನೆ ನಡೆಸಲಿದೆ.
ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಜಿಂದಾಲ್ಗೆ ಭೂಮಿ ನೀಡುತ್ತಿರುವುದು ಮತ್ತು ಬರ ನಿರ್ವಹಣೆಯಲ್ಲಿ ಸರ್ಕಾರ ಎಡವಿರುವುದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಹುಬ್ಬಳ್ಳಿ - ಧಾರವಾಡ, ಬಳ್ಳಾರಿ, ಬೆಂಗಳೂರಿನಲ್ಲಿ ಜೂನ್ 1 1ರಂದು ಬೃಹತ್ ಪ್ರತಿಭಟನೆ ನಡೆಸಲಿದೆ. ಜೊತೆಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಳ್ಳಲಿದೆ.
3667 ಎಕರೆ ಜಮೀನನ್ನು ಜಿಂದಾಲ್ಗೆ ಪರಭಾರೆ ಮಾಡುವ ರಾಜ್ಯ ಸರ್ಕಾರದ ನಿರ್ಣಯದ ವಿರುದ್ದ ಜೂನ್ 13,14,15ರಂದು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಧರಣಿ ನಡೆಸಲು ರಾಜ್ಯ ಬಿಜೆಪಿ ಘಟಕ ನಿರ್ಧರಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿರುವ ಬಿಜೆಪಿ ಶಾಸಕರು, ಸಂಸದರು ಜಿಂದಾಲ್ಗೆ ಭೂಮಿ ನೀಡುವ ನಿರ್ಧಾರ ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಿದ್ದಾರೆ. ವಿಶೇಷ ಅಂದರೆ ಯಡಿಯೂರಪ್ಪ ಧರಣಿಗೂ ಮುನ್ನವೇ ಪುತ್ರ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಯುವ ಮೋರ್ಚಾ ಪ್ರತಿಭಟನೆ ನಡೆಸುತ್ತಿದೆ.