ಬೆಂಗಳೂರು: ಲೋಕಸಭಾ ಚುನಾವಣೆಗೆ ಮೊದಲ ಹಂತದಲ್ಲಿ 21 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದ ಬಿಜೆಪಿ, ಇಂದು ಎರಡು ಕ್ಷೇತ್ರಗಳ ಹೆಸರು ಅಂತಿಮಗೊಳಿಸಿದ್ದು,ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ನೀಡಿದ್ರೆ, ಕೋಲಾರದಲ್ಲಿ ಮುನಿಸ್ವಾಮಿಗೆ ಟಿಕೆಟ್ ನೀಡಿದೆ.
ಬಿಜೆಪಿ ಇಂದು ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕಟಿಸಿದೆ. ಮಂಡ್ಯದಲ್ಲಿ ರಾಜ್ಯ ನಾಯಕರ ಶಿಫಾರಸ್ಸನ್ನು ಒಪ್ಪಿರುವ ಹೈಕಮಾಂಡ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸುವ ನಿರ್ಧಾರ ಪ್ರಕಟಿಸಿದೆ.
ಇದರ ಜೊತೆಗೆ ಕೋಲಾರದಲ್ಲಿ ಅಚ್ಚರಿಯ ಆಯ್ಕೆ ಮಾಡಲಾಗಿದೆ. ಚೆಲುವಾದಿ ನಾರಾಯಣ ಸ್ವಾಮಿ ಹೆಸೆರೇ ಫೈನಲ್ ಎನ್ನಲಾಗಿತ್ತು ಜೊತೆಗೆ ಡಿ.ಎಸ್.ವೀರಯ್ಯ ಕೂಡ ರೇಸ್ ನಲ್ಲಿದ್ದರು ಈ ಎರಡು ಹೆಸರುಗಳನ್ನೇ ರಾಜ್ಯದ ನಾಯಕರು ಹೈಕಮಾಂಡ್ಗೆ ಶಿಫಾರಸ್ಸು ಮಾಡಿದ್ದರು. ಆದರೆ ಶಿಫಾರಸ್ಸು ಪಟ್ಟಿಯಲ್ಲಿ ಹೆಸರೇ ಇಲ್ಲದ ಮುನಿಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಬಿಜೆಪಿ ವರಿಷ್ಠರು ಅಚ್ಚರಿ ನಡೆ ಇಟ್ಟಿದ್ದಾರೆ. ರಾಜ್ಯ ನಾಯಕರು ಕೂಡ ಅನಿರೀಕ್ಷಿತ ಆಯ್ಕೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮುನಿಸ್ವಾಮಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರ ಬೆಂಬಲಿಗರಾಗಿದ್ದು, ಈ ಅಚ್ಚರಿ ಆಯ್ಕೆಯ ಹಿಂದೆ ಅವರ ಕೈವಾಡವಿದೆಯೇ ಎನ್ನುವ ಶಂಕೆ ಕೂಡ ಕೆಲ ನಾಯಕರಲ್ಲಿ ವ್ಯಕ್ತವಾಗಿದೆ.