ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ಸ್ಥಾನಕ್ಕೆ ನಾಳೆ ನೇಮಕವಾಗಲಿದ್ದು, ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಾಳೆ ಅಧಿಕೃತ ಘೋಷಣೆ ಮಾಡಲಿದ್ದಾರೆ.
ಹಿರಿಯ ಮುಖಂಡ, ಶಾಸಕ ಹೆಚ್.ವಿಶ್ವನಾಥ್ ಅವರ ರಾಜೀನಾಮೆಯಿಂದ ತೆರವಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷರ ಹುದ್ದೆಗೆ ಸಕಲೇಶಪುರ ಕ್ಷೇತ್ರದ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಹಾಗೂ ಕಾರ್ಯಾಧ್ಯಕ್ಷರ ಹುದ್ದೆಗೆ ಮಧು ಬಂಗಾರಪ್ಪ ಅವರ ಹೆಸರು ಬಹುತೇಕ ಅಂತಿಮವಾಗಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಪಕ್ಷದ ಕಚೇರಿ ಜೆಪಿ ಭವನದಲ್ಲಿ ವರಿಷ್ಠರು ಘೋಷಣೆ ಮಾಡಲಿದ್ದಾರೆ.
ಪಕ್ಷದಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಕೊರಗು ಇದ್ದು, ಅವರಿಗೆ ಮನ್ನಣೆ ನೀಡಲಾಗುವುದು ಎಂದು ಇತ್ತೀಚೆಗಷ್ಟೇ ದೇವೇಗೌಡರು ಹೇಳಿಕೆ ನೀಡಿದ್ದರು. ಅದರಂತೆ ಆರು ಬಾರಿ ಶಾಸಕರಾಗಿರುವ ಹೆಚ್.ಕೆ.ಕುಮಾರಸ್ವಾಮಿಗೆ ಅಧ್ಯಕ್ಷ ಸ್ಥಾನ ನೀಡಲು ಮುಂದಾಗಿದ್ದಾರೆ. ಅಂತೆಯೇ ಪಕ್ಷದ ಯುವ ಘಟಕದ ಅಧ್ಯಕ್ಷ ಮಧುಬಂಗಾರಪ್ಪ ಅವರಿಗೆ ಕಾರ್ಯಾಧ್ಯಕ್ಷ ಹುದ್ದೆಯೂ ನೀಡುವ ಬಗ್ಗೆ ನಿರ್ಧರಿಸಲಾಗಿದೆ ಎನ್ನಲಾಗಿದೆ.
ವಿಶ್ವನಾಥ್ ಅವರು ರಾಜೀನಾಮೆ ನೀಡಿದರೂ ಅಂಗೀಕರಿಸಲು ಹಿಂದೇಟು ಹಾಕಿದ ದೇವೇಗೌಡರು, ವಿಶ್ವನಾಥ್ ಅವರಿಂದಲೇ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಲಾಗುವುದು ಎಂದಿದ್ದರು. ಅದರಂತೆ ವಿಶ್ವನಾಥ್ ಅವರಿಂದ ಹೊಸ ಅಧ್ಯಕ್ಷರಿಗೆ ಪಕ್ಷದ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸುವ ಸಾಧ್ಯತೆ ಇದೆ. ಜುಲೈ 11 ಅಥವಾ 12 ರಂದು ಪರಿಶಿಷ್ಟರ ಸಮಾವೇಶ ನಡೆಸಿ, ಅಲ್ಲಿ ರಾಜ್ಯಾಧ್ಯಕ್ಷರನ್ನು ಘೋಷಿಸುವ ಬಗ್ಗೆ ದೇವೇಗೌಡರು ತಿಳಿಸಿದ್ದರು. ಆದರೆ ವಿಶ್ವನಾಥ್ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿರುವ ಕಾರಣ ಅದಷ್ಟು ಬೇಗ ಹುದ್ದೆ ಹಸ್ತಾಂತರಿಸುವ ಕೆಲಸ ಮುಗಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ನಾಳೆ ಒಳ್ಳೆಯ ದಿನ ಎಂಬ ಕಾರಣಕ್ಕಾಗಿ ನೂತನ ರಾಜ್ಯಾಧ್ಯಕ್ಷರ ಹೆಸರನ್ನು ಘೋಷಣೆ ಮಾಡಲಿದ್ದಾರೆ. ಪಕ್ಷದ ಸಂಘಟನೆಯಲ್ಲಿ ತೊಡಗಿರುವ ದೇವೇಗೌಡರು ನಾಳೆಯೇ ಪದಾಧಿಕಾರಿಗಳ ಬದಲಾವಣೆಯನ್ನು ಸಹ ಮಾಡಲು ಮುಂದಾಗಿದ್ದಾರೆ. ಹಲವು ಹುದ್ದೆಗಳನ್ನು ಕಾರ್ಯಕರ್ತರಿಗೆ ನೀಡಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಬಲಗೊಳಿಸುವಲ್ಲಿ ಕಾರ್ಯೋನ್ಮುಖವಾಗಿದ್ದಾರೆ.