ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸ ಮತ್ತೆ ಚಟುವಟಿಕೆಯ ಕೇಂದ್ರವಾಗಿದ್ದು, ಇಂದು ಬೆಳಗ್ಗೆ ಶಾಸಕರಾದ ಆರ್.ಶಂಕರ್ ಹಾಗೂ ಮಹೇಶ್ ಕುಮಟಳ್ಳಿ ಜತೆ ಸಮಾಲೋಚಿಸಿದ್ದಾರೆ.
ಕಳೆದ ತಿಂಗಳ 21ರಿಂದ ಮೇ 1ರವರೆಗೆ ಬೆಂಗಳೂರಿನಲ್ಲಿಯೇ ತಂಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಯಾವೊಬ್ಬ ಕಾಂಗ್ರೆಸ್ ನಾಯಕರೂ ಭೇಟಿಯಾಗಿರಲಿಲ್ಲ. ಇದರಿಂದ ಬೇಸರಗೊಂಡು ಲೋಕಸಭೆ ಚುನಾವಣೆ ಫಲಿತಾಂಶ ಬರುವವರೆಗೂ ಬೆಂಗಳೂರು ಬಿಟ್ಟು ಯೂರೋಪ್ ಪ್ರವಾಸಕ್ಕೆ ತೆರಳಲು ನಿರ್ಧರಿಸಿದ್ದರು. ಆದರೆ ಇಂದು ಬೆಳಗ್ಗೆ ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಇವರನ್ನು ಮಾಜಿ ಸಚಿವ ಆರ್.ಶಂಕರ್ ಹಾಗೂ ಶಾಸಕ ಮಹೇಶ್ ಕುಮಟಳ್ಳಿ ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಒಂದು ಗಂಟೆಗೂ ಹೆಚ್ಚು ಕಾಲ ಇಬ್ಬರು ನಾಯಕರ ಜತೆ ರಮೇಶ್ ಜಾರಕಿಹೊಳಿ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್ನ ನಿವಾಸದಲ್ಲಿ ಮಾತುಕತೆ ನಡೆಸಿ, ನಂತರ ಅವರ ಜತೆಯೇ ನಿವಾಸದಿಂದ ಹೊರಗೆ ತೆರಳಿದ್ದಾರೆ. ಮೂಲಗಳ ಪ್ರಕಾರ ಬೇಸರಗೊಂಡಿದ್ದ ರಮೇಶ್ ಜಾರಕಿಹೊಳಿ ಬೆಳಗಾವಿಯತ್ತ ತೆರಳಿದ್ದರು. ಆದರೆ ಅಲ್ಲಿ ಹೆಚ್ಚು ಸಮಯ ಕಳೆಯಲಾಗದೇ ವಾಪಸ್ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.
ನಾನೊಬ್ಬನೇ ರಾಜೀನಾಮೆ ಕೊಡಲ್ಲ, ನನ್ನೊಂದಿಗೆ ಕೆಲ ಆಪ್ತರು ಕೂಡ ರಾಜೀನಾಮೆ ನೀಡಲಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಈ ಹಿಂದೆ ಹೇಳಿದ್ದರು. ಅದರ ಪ್ರಕಾರವೇ ಹಲವರನ್ನು ಸಂಪರ್ಕಿಸುವ ಯತ್ನ ಮಾಡಿದ್ದರಾದರೂ ಫಲ ಕೊಟ್ಟಿರಲಿಲ್ಲ. ಇದೀಗ ಇನ್ನೊಂದು ಸುತ್ತು ಪ್ರಯತ್ನ ಆರಂಭಿಸಿದ್ದು, ಮಹೇಶ್ ಕುಮಟಳ್ಳಿ ಹಾಗೂ ಆರ್. ಶಂಕರ್ ಭೇಟಿ ಮಾಡಿ ಚರ್ಚಿಸಿದ್ದಾರೆ.