ಬೆಂಗಳೂರು: ವಿಕಲಚೇತನ ಖಾಸಗಿ ಸಂಸ್ಥೆ ನಡೆಸ್ತೀವಿ ಅಂತ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಹಂಸಧ್ವನಿ ಎಂಬ ವಿಕಲಚೇತನ ಶಾಲೆ ನಡೆಸುತ್ತೀವಿ ಅಂತ ಹೇಳಿ ನಕಲಿ ಡಾಕ್ಯೂಮೆಂಟ್ ಸೃಷ್ಟಿಸಿ ನಕಲಿ ಸಹಿ ಹಾಕಿ ಆಗಿನ ಬೆಂಗಳೂರಿನ ಕಮಿಷನರ್ ಆಗಿದ್ದ ನಿಜಾಮುದ್ದೀನ್ ಹಾಗೂ ಅವರ ಪತ್ನಿ ಲಕ್ಷ್ಮಿ ನಿಜಾಮುದ್ದೀನ್ ಸರ್ಕಾರದ ದಿಕ್ಕು ತಪ್ಪಿಸಿ ಹಣ ಪಡೆದಿದ್ದರಂತೆ.
ಕಮಿಷನರ್ ನಿಜಾಮುದ್ದೀನ್, ಆಗಿನ ಕಾಂಗ್ರೆಸ್ ಸರ್ಕಾರದ ಬಳಿ ಬಿನ್ನಮಂಗಳ ಜಾಗದಲ್ಲಿ ವಿಕಲಚೇತನ ಶಾಲೆ ನಿರ್ಮಾಣ ಮಾಡ್ತೀವಿ ಅಂತ 3 ಎಕರೆ ಜಮೀನು ತೆಗೆದುಕೊಂಡು, ಹಣ ಬಿಡುಗಡೆ ಮಾಡಿಸಿಕೊಂಡಿದ್ದರಂತೆ. ನಂತರ ಅಲ್ಲಿ ವಿಕಲಚೇತನ ಸಂಸ್ಥೆ ಕಟ್ಟಿ, ಅಲ್ಲಿ ಮಕ್ಕಳಿಗೆ ಕೊಡುವ ಸೌಲಭ್ಯ ನೀಡದೆ ಸರ್ಕಾರದ ಹಣವನ್ನ ತಮ್ಮ ಸ್ವಂತ ಕೆಲಸಕ್ಕೆ ಉಪಯೋಗಿಸಿಕೊಂಡಿದ್ದಾರೆ. ಈ ವಿಚಾರ ಸರ್ಕಾರಕ್ಕೆ ಗೊತ್ತಾಗಿ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು.
2016ರಲ್ಲಿ ಅನಾರೋಗ್ಯದಿಂದಾಗಿ ನಿಜಾಮುದ್ದೀನ್ ಹಾಗೂ ಲಕ್ಷ್ಮಿ ನಿಧನರಾಗಿದ್ದರು. ಅವರ ಸಾವಿನ ಬಳಿಕ ಹಂಸಧ್ವನಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಾಧಾಮಣಿ ಎಂಬ ಮಹಿಳೆ ಈ ಶಾಲೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು, ನಿಜಾಮುದ್ದಿನ್ ಮಾಡಿದ ರೀತಿನೇ ಕೋಟಿ ಕೋಟಿ ಗೋಲ್ಮಾಲ್ ಮಾಡಿಬಿಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.
ಈ ವಿಚಾರ ತಿಳಿದ ಹಿರಿಯ ವಕೀಲ ಅಮೃತೇಶ್ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. 2016ರಲ್ಲಿ ಈ ಪ್ರಕರಣ ವಿಚಾರಣೆಗೆ ಬಂದಿದ್ದು, ಕೂಡಲೇ ಎಲ್ಲಾ ಪ್ರಾಪರ್ಟಿಯನ್ನ ಸರ್ಕಾರಕ್ಕೆ ಒಪ್ಪಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ಇದೀಗ ಆ ಸಂಸ್ಥೆಯ ಕೆಲವರು ಹಂಸಧ್ವನಿ ನಮಗೆ ಸೇರಿದ್ದು ಅಂತ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ 4 ಕೋಟಿ ರೂ. ಸರ್ಕಾರಕ್ಕೆ ಮೋಸ ಮಾಡಿ ಅದರ ಸವಲತ್ತನ್ನ ಪಡೆದುಕೊಂಡು ಮಕ್ಕಳ ಬಾಳಿನಲ್ಲೂ ಚೆಲ್ಲಾಟ ವಾಡ್ತಿದ್ದಾರೆ ಎನ್ನಲಾಗುತ್ತಿದೆ.