ಬೆಂಗಳೂರು: ಅಭಿವೃದ್ಧಿಯ ವಿಷಯದಲ್ಲಿ ಕರ್ನಾಟಕ ದ್ವಿಮುಖ ನೀತಿ ಅನುಸರಿಸಬಾರದು ಎಂದು 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ. ಸಿಂಗ್ ಹೇಳಿದರು.
ನಗರದಲ್ಲಿ ನಡೆದ ಹಣಕಾಸು ಆಯೋಗದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಯ ವಿಷಯದಲ್ಲಿ ಕರ್ನಾಟಕ ದ್ವಿಮುಖ ನೀತಿ ಅನುಸರಿಸಬಾರದು. ಕರ್ನಾಟಕ ರಾಷ್ಟ್ರದ ಜಿಡಿಪಿಗೆ ಸಾಕಷ್ಟು ಕೊಡುಗೆ ನೀಡುತ್ತಿದೆ. ಸ್ಟಾರ್ಟ್ ಅಪ್, ಐಟಿ/ ಬಿಟಿ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಇನ್ನೊಂದು ಕಡೆ ಬರ, ಹಿಂದುಳಿದ ಜಿಲ್ಲೆಗಳೂ ಇದೆ. ಇಂತಹ ಆರ್ಥಿಕ ಅಸಮಾನತೆ ಆದಷ್ಟು ಶೀಘ್ರವೇ ಸರಿ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಹಣಕಾಸು ಆಯೋಗವು ರಾಜ್ಯ ಸರ್ಕಾರದ ಆರ್ಥಿಕತೆಯಲ್ಲಿನ ನ್ಯೂನ್ಯತೆಗಳನ್ನು ಪಟ್ಟಿ ಮಾಡಿ ಸಿಎಂ ಅವರಿಗೆ ನೀಡಲಾಗಿದೆ. ರಾಜ್ಯ ಸರ್ಕಾರದ ಸಾಲದ ಕುರಿತು ಆತಂಕ ವ್ಯಕ್ತಪಡಿಸಿದ ಅವರು, ಮುಂದಿನ 5 ವರ್ಷಗಳಲ್ಲಿ ಸರ್ಕಾರ ಮಾಡುವ ವೆಚ್ಚ ಖಜಾನೆಗೆ ಬರುವ ಆದಾಯದ ಮೇಲೆ ಅವಲಂಬಿತವಾಗಿರಬೇಕು. ಮತ್ತೆ ಮತ್ತೆ ಸಾಲ ಮಾಡಿ ಆದಾಯಕ್ಕಿಂತ ಅಧಿಕ ವೆಚ್ಚ ಮಾಡಿದರೆ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ತಲಾ ಆದಾಯ ಹೆಚ್ಚಳ ಆಗಿದ್ದರೂ ಶೇ 21ರಷ್ಟು ಬಡತನವಿದೆ. ಇಷ್ಟೊಂದು ತಲಾ ಆದಾಯ ಇರುವಾಗ ಶೇ. 21ರಷ್ಟ ಬಡತನ ಇರಲು ಹೇಗೆ ಸಾಧ್ಯ?
ಕಳೆದ ಎಂಟು ವರ್ಷಗಳಿಂದ ಬರವಿದೆ. ಆದರೆ, ನೀರಾವರಿ ಯೋಜನೆಗಳು ಅರ್ಧದಲ್ಲಿ ನಿಂತಿದ್ದು ಏಕೆ? 12 ಸಾವಿರ ಕೋಟಿ ರೂ. ವಿದ್ಯುತ್ ಸಬ್ಸಿಡಿಗೆ ಸರ್ಕಾರ ಖರ್ಚು ಮಾಡಿರುವ ಬಗ್ಗೆಯೂ ಪ್ರಶ್ನಿಸಿದರು.
ಜಿಎಸ್ಟಿಯಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತಿಲ್ಲ ಎಂಬ ರಾಜ್ಯದ ವಾದಕ್ಕೆ ಪ್ರತಿಕ್ರಿಯಿಸಿದ ಸಿಂಗ್, ವ್ಯಾಟ್ ಪದ್ಧತಿಯಲ್ಲೇ ರಾಜ್ಯಸರ್ಕಾರಗಳಿಗೆ ಹೆಚ್ಚು ತೆರಿಗೆ ಸಂಗ್ರಹ ಆಗುತ್ತಿತ್ತು. ಜೆಎಸ್ಟಿ ವಿಚಾರವಾಗಿ ಹಲವು ರಾಜ್ಯಗಳು ಆಕ್ಷೇಪಿಸಿ. ಜಿಎಸ್ಟಿ ಕಮಿಷನ್- ಹಣಕಾಸು ಆಯೋಗದ ಮಧ್ಯೆ ಈ ಬಗ್ಗೆ ಚರ್ಚೆ ಅಗತ್ಯವಾಗಿದ್ದು, ಪ್ರಧಾನಿ ಮೋದಿ ಅವರು ಮಧ್ಯ ಪ್ರವೇಶ ಮಾಡಬೇಕು ಎಂದರು.