ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ ಬಳಿಕ ಇಂದಿನಿಂದ ಜಾರಿಗೆ ಬರುತ್ತಿದೆ.
ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಹಿಂದೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿತ್ತು.
ನಾಲ್ಕನೇ ಶನಿವಾರ ರಜೆ ಎಲ್ಲ ಇಲಾಖೆಯ ನೌಕರರಿಗೆ ಅನ್ವಯವಾಗಲಿದೆ. ಆದರೆ, 4ನೇ ಶನಿವಾರದ ರಜೆಗೆ ಪ್ರತಿಯಾಗಿ ಸರ್ಕಾರಿ ನೌಕರರ ಸಾಂದರ್ಭಿಕ ರಜೆ ಪೈಕಿ ಐದಕ್ಕೆ ಕತ್ತರಿ ಹಾಕಲಾಗಿದೆ. ಅದೇ ರೀತಿ ಯಾವುದೇ ಜಯಂತಿ ರಜೆಯನ್ನು ಕಡಿತ ಮಾಡದೇ ಇರಲು ತೀರ್ಮಾನಿಸಿದೆ.
ಇದರಿಂದ ಸರ್ಕಾರಿ ನೌಕರರಿಗೆ ಒಟ್ಟಾರೆಯಾಗಿ ಏಳು ರಜೆಗಳು ಹೆಚ್ಚುವರಿಯಾಗಿ ದೊರೆಯಲಿವೆ. ಜಯಂತಿಗಳ ರಜೆ ಕಡಿತಗೊಳಿಸಿ ನಾಲ್ಕನೇ ಶನಿವಾರ ರಜೆ ನೀಡಲು 6ನೇ ವೇತನ ಆಯೋಗದ ಶಿಫಾರಸಿನಲ್ಲಿ ತಿಳಿಸಲಾಗಿತ್ತು. ಈ ಕುರಿತು ಕೃಷ್ಣ ಭೈರೇಗೌಡ ನೇತೃತ್ವದ ಸಂಪುಟ ಉಪ ಸಮಿತಿ ವರದಿ ನೀಡಿತ್ತು. ಯಾವುದೇ ಜಯಂತಿಯ ರಜೆ ಕಡಿತಗೊಳಿಸದಿರಲು ಸರ್ಕಾರ ತೀರ್ಮಾನಿಸಿದೆ.