ಬಸವಕಲ್ಯಾಣ : ಜೆಡಿಎಸ್ ಪಕ್ಷಕ್ಕೆ ಮುಸ್ಲಿಂ ಜನರ ಬಗ್ಗೆ ಅಷ್ಟೊಂದು ಅನುಕಂಪವಿದ್ದರೆ, ಜೆಡಿಎಸ್ ಪಕ್ಷದ ಪ್ರಾಬಲ್ಯವಿರುವ ಹಾಸನ, ರಾಮನಗರ, ಚನ್ನರಾಯಪಟ್ಟಣ ಕ್ಷೇತ್ರಗಳಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿ ಗೆಲ್ಲಿಸಲಿ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದರು.
ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಳ್ಳುವ ಮೂಲಕ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಹೊರತು, ಜೆಡಿಎಸ್ ಗೆಲುವಿಗಾಗಿ ಹೋರಾಡುತ್ತಿಲ್ಲ. ಬಿಜೆಪಿ ಗೆಲುವಿಗಾಗಿ ಜೆಡಿಎಸ್ ಸ್ಪರ್ಧಿಸಿದೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಆರೋಪಿಸಿದರು.
ಈ ಹಿಂದೆ ರಾಜ್ಯದಲ್ಲಿ ಎದುರಾಗಿರುವ ಯಾವುದೇ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕುವುದಿಲ್ಲ ಎಂದು ಜೆಡಿಎಸ್ ಪಕ್ಷದ ವರಿಷ್ಠ ದೇವೆಗೌಡ ಹಾಗೂ ಕುಮಾರಸ್ವಾಮಿ ಹೇಳಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಸೋಲಿಸಲು ಜೆಡಿಎಸ್‌ನ ಕುಮಾರಸ್ವಾಮಿ ಅವರು ಬಿಜೆಪಿ ಬಳಿ 10 ಕೋಟಿ ರೂ. ಹಣ ಡೀಲ್ ಮಾಡಿಕೊಂಡು ಅಲ್ಪಸಂಖ್ಯಾತ ವ್ಯಕ್ತಿಗೆ ಕಣಕ್ಕಿಳಿಸಿದೆ ಎಂದು ಜೆಡಿಎಸ್ ವಿರುದ್ಧ ಹರಿಹಾಯ್ದರು.
ಜೆಡಿಎಸ್ ಪಕ್ಷದ ವರಿಷ್ಠರಿಗೆ ಅಲ್ಪಸಂಖ್ಯಾತರ ಮೇಲೆ ಇಷ್ಟೊಂದು ಪ್ರೀತಿ, ಮಮಕಾರ ಇದ್ದರೆ ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಾದ ರಾಮನಗರ, ಹಾಸನ, ಚನ್ನಪಟ್ಟಣದಲ್ಲಿ ಅಲ್ಪ ಸಂಖ್ಯಾತರಿಗೆ ಟಿಕೆಟ್ ನೀಡಿ ಗೆಲ್ಲಿಸಬೇಕು. ಆದರೆ, ಬಸವಕಲ್ಯಾಣದಲ್ಲಿ ಇದೇ ಮೊದಲು ಅಲ್ಪ ಸಂಖ್ಯಾತರಿಗೆ ಟಿಕೆಟ್ ನೀಡಿ ಮತ ವಿಭಜಿಸಿ, ಕೋಮುವಾದಿ ಬಿಜೆಪಿ ಗೆಲ್ಲಲು ಸಹಕರಿಸುತ್ತಿದೆ.
ಜೆಡಿಎಸ್ ಗೆಲ್ಲುವ ಕಡೆ ಅಲ್ಪ ಸಂಖ್ಯಾತರ ನೆನಪಾಗುವುದಿಲ್ಲ. ಸೋಲುವ ಕಡೆ ಅಲ್ಪ ಸಂಖ್ಯಾತರ ಮೇಲೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಬರುತ್ತದೆ ಎಂದು ಆರೋಪಿಸಿದ ಜಮೀರ್, ಎಮ್‌ಐಎಮ್ ಕೂಡ ತನ್ನ ಪಕ್ಷದಿಂದ ಅಭ್ಯರ್ಥಿ ಹಾಕಿದೆ. ಆದರೆ, ಆ ಪಕ್ಷದ ಆಟ ಇಲ್ಲಿ ನಡೆಯಲ್ಲ. ಅದು ಕೂಡ ಬಿಜೆಪಿ ಗೆಲುವಿಗೆ ನಿಂತಿದೆ ಎಂದು ತಿಳಿಸಿದರು.
2006 ಮತ್ತು 2018ರಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಜ್ ಪ್ರವಾಸದ ಉದ್ಘಾಟನೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ಕೂಡ ಬಂದಿಲ್ಲ. ಇವರಿಗೆ ಅಲ್ಪಸಂಖ್ಯಾತರ ಮೇಲೆ ಎಷ್ಟೊಂದು ಪ್ರೀತಿ ಇದೆ ಎಂದು ತೋರಿಸಿ ಕೊಡುತ್ತದೆ.
ಆದರೆ, ಪ್ರತಿ ವರ್ಷವೂ ಕೂಡ ಯಾರೇ ಮುಖ್ಯಮಂತ್ರಿ ಇದ್ದರೂ ನಮ್ಮ ಮನವಿಗೆ ಸ್ಪಂದಿಸಿ ಅಲ್ಪ ಸಂಖ್ಯಾತರ ಹಜ್ ಪ್ರವಾಸದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಕುಮಾರಸ್ವಾಮಿ ಆಗಮಿಸದೇ ಇರುವುದು ನೋಡಿ ಅವರಿಗೆ ನಮ್ಮ ಸಮಾಜದ ಮೇಲೆ ಎಷ್ಟು ಪ್ರೀತಿ ಇದೆ ಅಂತ ಅರ್ಥವಾಗುತ್ತದೆ. ಕೇವಲ ಮತ ಪಡೆದುಕೊಳ್ಳಲು ಮಾತ್ರ ಅಲ್ಪಸಂಖ್ಯಾರೊಂದಿಗೆ ನಾಟಕ ಮಾಡುತ್ತಾರೆ ಎಂದು ದೂರಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪ ಸಂಖ್ಯಾತರಿಗೆ 3,150 ಕೋಟಿ ರೂ. ಅನುದಾನ ನೀಡಿದರೆ ಹೆಚ್‌ಡಿಕೆ ಅವರು ಸಿಎಂ ಆಗಿದ್ದಾಗ ಈ ಅನುದಾನವನ್ನು 1,800 ಕೋಟಿ ರೂ.ಗೆ ಇಳಿಸಿದರು. ಸಿದ್ದು ಸರ್ಕಾರದಲ್ಲಿ ಟಿಪ್ಪು ಜಯಂತಿ ಘೋಷಿಸಿತ್ತು. ಆದರೆ, ಹೆಚ್‌ಡಿಕೆ ಅವರು ಬಿಜೆಪಿ ಜೊತೆಗೆ ಕೈಜೋಡಿಸಿ ಗೋಹತ್ಯೆ ನಿಷೇಧ ಕಾನೂನಿಗೆ ಬೆಂಬಲ ನೀಡಿ ಬಿಲ್ ಪಾಸ್ ಮಾಡಿಕೊಳ್ಳಲು ಸಹಕರಿಸಿದರು ಎಂದರು.
ಕ್ಷೇತ್ರದಲ್ಲಿ ದಿ.ಶಾಸಕ ಬಿ.ನಾರಾಯಣರಾವ ಅವರು ಹೋರಾಟದ ಮೇಲೆ ಗೆದ್ದು ಬಂದು ಮೊದಲ ಬಾರಿ ಶಾಸಕರಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ದುಡಿದಿದ್ದರು. ಆದರೆ, ವಿಧಿ ಅವರನ್ನು ಬಲಿ ಪಡೆದಿದೆ. ಶಾಸಕರ ನಿಧನದ ನಂತರ ನಮ್ಮ ಪಕ್ಷ ಅವರ ಕುಟುಂಬಕ್ಕೆ ಟಿಕೆಟ್ ನೀಡಿದೆ. ಮತದಾರರ ಮುಂದೆ ತೆರಳಿ ಹಕ್ಕನ್ನು ಕೇಳುತ್ತೇವೆ. ಮತದಾರರು ಆಶೀರ್ವದಿಸುವ ವಿಶ್ವಾಸವಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುಂಚಿತವಾಗಿ ದೇಶದ ಜನರಿಗೆ ನೀಡಿದ ಭರವಸೆಗಳು ಹುಸಿಗೊಂಡಿವೆ. ನಿತ್ಯ ಬೆಲೆ ಏರಿಕೆ ಮಾಡುವ ಮೂಲಕ ಜನರನ್ನ ಕೇಂದ್ರ ಸರ್ಕಾರ ಸಂಕಷ್ಟಕ್ಕೆ ದೂಡುತ್ತಿದೆ ಎಂದ ಅವರು, ಬಿಜೆಪಿ ಸರ್ಕಾದ ಆಡಳಿತದಿಂದ ಜನರು ಬೇಸತ್ತು ಮುಂದಿನ 2023ರಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯನವರು ಮತ್ತೆ ರಾಜ್ಯದ ಸಿಎಂ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.