ಬಸವಕಲ್ಯಾಣ (ಬೀದರ್): ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಕಳೆದ ಎರಡು ತಿಂಗಳಿಂದ ಶಾಂತವಾಗಿದ್ದ ರಾಜ್ಯದಲ್ಲಿ ಈಗ ಮತ್ತೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಯುವಕರ ಗುಂಪೊಂದು ಮದ್ಯದ ಅಮಲಿನಲ್ಲಿ ಕ್ವಾರಂಟೈನ್ ಕೇಂದ್ರದ ಬಳಿ ತೆರಳಿ ದಾಂಧಲೆ ನಡೆಸಿದ ಪ್ರಸಂಗ ತಾಲೂಕಿನ ಕೋಹಿನೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಮುಂಬೈನಿಂದ ಆಗಮಿಸಿದ್ದ ಅದೇ ಗ್ರಾಮದ ಯುವಕ ವಾಸ್ತವ್ಯ ಹೂಡಿದ್ದರು. ಈ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳು ಹಲ್ಲೆ ನಡೆಸಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಮಧ್ಯರಾತ್ರಿ ಸುಮಾರು 1 ಗಂಟೆಗೆ ಈ ಯುವಕರ ಗುಂಪು ಕುಡಿದು ಕ್ವಾರಂಟೈನ್ ಕೇಂದ್ರದ ಬಳಿ ತೆರಳಿ ಕಿರುಚಾಡಲಾರಂಭಿಸಿದ್ದಾರೆ. ಕ್ವಾರಂಟೈನ್ ಕೇಂದ್ರದಲ್ಲಿದ್ದ ಯುವಕ ಇದನ್ನು ಪ್ರಶ್ನಿಸಿದ್ದಕ್ಕಾಗಿ ಆತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿದ ಕೂಡಲೇ ತಹಶೀಲ್ದಾರ್ ಸಾವಿತ್ರಿ ಸಲಗರ್, ಮಂಠಾಳ ಠಾಣೆ ಪಿಎಸ್ಐ ಬಸಲಿಂಗಪ್ಪ ನೇತೃತ್ವದ ಸಿಬ್ಬಂದಿಗಳ ತಂಡ ಗ್ರಾಮಕ್ಕೆ ತೆರಳಿ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಹಲ್ಲೆ ನಡೆಸಿದ ಮೂವರನ್ನೂ ತಮ್ಮ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.