ಬೀದರ್: ಇತ್ತೀಚಿನ ದಿನಗಳಲ್ಲಿ ಕೃಷಿ ಎಂದರೆ ಭಾಗಶಃ ಜನ ಮೂಗು ಮುರಿಯುವವರೇ ಅಧಿಕ. ಬರೀ ಸಂಕಷ್ಟ, ಲಾಭವಿಲ್ಲದ ಉದ್ಯೋಗ ಅಂತ ಒದ್ದಾಡುವವರೇ ಜಾಸ್ತಿ. ಇಂತಹ ಮಾತುಗಳ ಮಧ್ಯೆ ತಾಲೂಕಿನ ಗುನ್ನಳ್ಳಿ ಗ್ರಾಮದ ಯುವ ಕೃಷಿಕ ರಾಜಕುಮಾರ ಪಾಟೀಲ್ ಎನ್ನುವವರು ಆಧುನಿಕ ಕೃಷಿ ಪದ್ಧತಿ ಮೂಲಕ ಬಂಗಾರದಂತಹ ಕಲ್ಲಂಗಡಿ ಬೆಳೆದು ಉತ್ತಮ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಫಸಲು ಕೈಗೆ ಬಂದಿದ್ದು ಸ್ಥಳೀಯ ಕೃಷಿಕರಿಗೆ ಮಾದರಿಯಾಗಿದ್ದಾರೆ.
ಪಾಟೀಲ್ ಅವರು ಒಟ್ಟು 10 ಎಕರೆ ಭೂಮಿಯ ಪೈಕಿ ಐದು ಎಕರೆ ಹೊಲದಲ್ಲಿ ಕಲ್ಲಂಗಡಿ ಹಾಕಿದ್ದು, ಗದ್ದೆಯ ತುಂಬಾ ಹಚ್ಚ ಹಸಿರಾದ ಬಳ್ಳಿ ಹಬ್ಬಿಕೊಂಡಿದೆ. ವಿವಿಧೆಡೆಯಿಂದ ತಂದ ಕಲ್ಲಂಗಡಿ ಸಸಿಗಳನ್ನು ನಾಟಿ ಮಾಡಿರುವ ಪಾಟೀಲ್ ಉತ್ತಮ ಇಳುವರಿ ಪಡೆಯುವ ಉತ್ಸಾಹದಲ್ಲಿದ್ದಾರೆ. ಒಂದು ಎಕರೆಗೆ ಸುಮಾರು 80 ಸಾವಿರ ರೂ. ಖರ್ಚು ಮಾಡಿರುವ ಅವರು ಸಮೃದ್ಧ ಕಲ್ಲಂಗಡಿ ಹಣ್ಣು ಬೆಳೆದಿದ್ದಾರೆ. ಅಲ್ಲದೇ ಪ್ರತಿ ಎಕರೆಯಿಂದ ಸುಮಾರು 2.50 ಲಕ್ಷ ರೂ. ಆದಾಯ ಬರಲಿದೆ ಎಂದು ನಿರೀಕ್ಷೆ ಸಹ ಇಟ್ಟುಕೊಂಡಿದ್ದಾರೆ.
ಮಳೆಯಾಶ್ರಿತ ಬೆಳೆಯನ್ನೇ ಅವಲಂಬಿಸಿರುವ ಇಂದಿನ ದಿನಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೀಡಾಗುವುದೇ ಹೆಚ್ಚು. ಆದರೆ, ಆಧುನಿಕ ಮತ್ತು ಸಾಂಪ್ರದಾಯಿಕ ಕೃಷಿಯೊಂದಿಗೆ ಉತ್ತಮ ಇಳುವರಿ ತೆಗೆಯಬಹುದು ಅನ್ನೋದಕ್ಕೆ ಇವರೇ ನಿದರ್ಶನ ಎಂದು ಸ್ಥಳೀಯರು ಪಾಟೀಲ್ ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.
ತೋಟಗಾರಿಕೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹೊಲಕ್ಕೆ ಕೊಟ್ಟಿಗೆ ಗೊಬ್ಬರವನ್ನೇ ಬಳಸಿರುವ ಅವರು, ಬೆಳೆಗೆ ತಕ್ಕಂತೆ ನೀರುಣಿಸಿ ನಾಟಿ ಮಾಡಿದ್ದಾರೆ. ಹಾಗಾಗಿ ಹೊಲದ ತುಂಬೆಲ್ಲ ಸಮೃದ್ಧವಾಗಿ ಹರಡಿರುವ ಕಲ್ಲಂಗಡಿ ಕಂಡು ತಾವೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಾಗಾಗಿ ದುಪ್ಪಟ್ಟು ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಫಸಲು ಕೈಗೆ ಬಂದಿದ್ದು ಇದೀಗ ಮಾರುಕಟ್ಟೆಗೆ ಹೋಗಲು ಸಿದ್ಧವಾಗಿದೆ. ಬಂಗಾರದಂತಹ ಬೆಳೆ ಬೆಳೆದಿರುವ ಬಗ್ಗೆ ಮಾಹಿತಿ ತಿಳಿದು ದೂರದ ದೆಹಲಿ, ಮುಂಬೈ, ಹೈದರಾಬಾದ್ ಸೇರಿದಂತೆ ರಾಜಕುಮಾರ ಪಾಟೀಲ್ ಅವರಿಗೆ ವಿವಿಧೆಡೆಯಿಂದ ಫೋನ್ ಕರೆಗಳು ಬರಲಾಂಭಿಸಿವೆಯಂತೆ.
''ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಸುಮಾರು ಐದು ಲಕ್ಷ ರೂ. ವರೆಗೆ ಆದಾಯ ನಿರೀಕ್ಷೆ ಇದೆ. ಆದರೆ, ಇಂದಿನ ಮಾರುಕಟ್ಟೆ ದರ ಗಮನಿಸಿದರೆ ಅದರ ಅರ್ಧದಷ್ಟಾದರೂ ಆದಾಯ ಬರುವ ನಿರೀಕ್ಷೆ ಇದೆ. ಇಂದಿನ ಮಾರುಕಟ್ಟೆಯಲ್ಲಿ ಬೆಲೆಗಳ ಏರಿಳಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಹಣ್ಣುಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿದರೆ ಲಾಭ ಇನ್ನಷ್ಟು ಹೆಚ್ಚಾಗಲಿದೆ. ಸರ್ಕಾರಿ ನೌಕರಿಕ್ಕಿಂತ ಕೃಷಿಯಲ್ಲಿ ಹೆಚ್ಚಿನ ಸಂಪಾದನೆ ಮಾಡಬಹುದು.
ಆದರೆ, ಇಂದಿನ ಮಾರುಕಟ್ಟೆ ಸಂಕಷ್ಟದ ಕಾರಣ ಬಹಳಷ್ಟು ಜನ ಹೊಲದತ್ತ ಚಿತ್ತ ಹರಿಸುತ್ತಿಲ್ಲ. ಪ್ರತಿ ವರ್ಷ ಇಳುವರಿ ಹೆಚ್ಚಳವಾಗುತ್ತಿದೆ. ಆದರೆ, ಖರ್ಚು ಮತ್ತು ಕೃಷಿ ಉಪಕರಣಗಳ ಬೆಲೆ ಹೆಚ್ಚಳದಿಂದ ಲಾಭದ ಮೊತ್ತ ಕಡಿಮೆಯಾಗುತ್ತಿದೆ. ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು'' ಎಂದು ಯುವ ರೈತ ರಾಜಕುಮಾರ ಪಾಟೀಲ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಕೆರೆಯ ರಾಜಕಾಲುವೆ ಒತ್ತುವರಿ; ತೆರವು ವೇಳೆ ಜನರಿಂದ ಹೈಡ್ರಾಮ