ಬಸವಕಲ್ಯಾಣ(ಬೀದರ್): ಮದುವೆಯಾಗಲು ಒಪ್ಪದ ಯುವಕನ ಮನೆ ಹಾಗೂ ಆತನ ಆಟೋಗೆ ಕೆರಳಿದ ಮಹಿಳೆಯೊಬ್ಬಳು ಬೆಂಕಿ ಹಚ್ಚಿ ಸುಟ್ಟಿರುವ ವಿಚಿತ್ರ ಆರೋಪ ಪ್ರಕರಣ ತಾಲೂಕಿನ ಬಾಗ್ ಹಿಪ್ಪರಗಾ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಾಗ್ ಹಿಪ್ಪರಗಾ ಗ್ರಾಮದ ನಿವಾಸಿ ಭೀಮರಾವ್ ಎನ್ನುವಾತನ ಮನೆ ಹಾಗೂ ಆತನ ಮನೆ ಮುಂದೆ ನಿಲ್ಲಿಸಿದ್ದ ಆಟೋಗೆ ಸುಮಾ ಎನ್ನುವ ಮಹಿಳೆ ಬೆಂಕಿ ಹಚ್ಚಿ ಸುಟ್ಟಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ.
ಮೂಲತಃ ಚಿಕನಾಗಾಂವ್ ಗ್ರಾಮದ ನಿವಾಸಿಯಾದ ಭೀಮರಾವ್ ಕೆಲ ದಿನಗಳ ಹಿಂದೆ ಸಸ್ತಾಪೂರ ಗ್ರಾಮದ ಸಮೀಪ ಆಡವಿಯಲ್ಲಿ ತನ್ನ ಕುಟುಂಬ ಸಹಿತ ಮನೆ ಮಾಡಿ ವಾಸವಿದ್ದ. ಈ ವೇಳೆ ಸುಮಾ ಎನ್ನುವ ಮಹಿಳೆ ಆತನಿಗೆ ಪರಿಚಯವಾಗಿದ್ದಾಳೆ. ನಂತರ ಮದುವೆ ಮಾಡಿಕೊಳ್ಳುವಂತೆ ಸುಮಾ ಭೀಮರಾವ್ಗೆ ಬೆನ್ನುಬಿದ್ದಿದ್ದಾಳೆ. ಸುಮಾಳ ಕಾಟ ತಾಳದೆ ಕುಟುಂಬ ಸಹಿತ ತನ್ನ ತಾಯಿ ತವರು ಮನೆಯಾಗಿರುವ ಬಾಗ್ ಹಿಪ್ಪರಗಾ ಗ್ರಾಮದಲ್ಲಿ ಮನೆ ಮಾಡಿ ಉಳಿದುಕೊಂಡಿದ್ದಾನೆ.
ಈ ಸುದ್ದಿ ತಿಳಿದ ಸುಮಾ ಕಳೆದ ಡಿ. 13 ರಂದು ಬಾಗ್ ಹಿಪ್ಪರಗಾ ಗ್ರಾಮಕ್ಕೆ ತೆರಳಿ ಮದುವೆ ಮಾಡಿಕೊಳ್ಳುಬೇಕು. ಇಲ್ಲವಾದರೆ ನಾನು ಕೊಟ್ಟ 4 ಲಕ್ಷ ರೂ. ಹಣ ಹಿಂದಿರುಗಿಸಬೇಕು ಎಂದು ಮತ್ತೆ ಕಿರಿಕಿರಿ ಮಾಡಿದ್ದಾಳೆ. ಇದಕ್ಕೆ ಒಪ್ಪದಿದ್ದಾಗ ಡಿ. 23ರಂದು ರಾತ್ರಿ ಮತ್ತೆ ಗ್ರಾಮಕ್ಕೆ ತೆರಳಿ ಭೀಮರಾವ್ ಅವರ ಮನೆ ಹಾಗೂ ಮನೆ ಮುಂದೆ ನಿಲ್ಲಿಸಿದ ಆಟೋಗೆ ಬೆಂಕಿ ಹಚ್ಚಿದ್ದಾಳೆ ಎನ್ನಲಾಗ್ತಿದೆ.
ಸುಮಾಳ ಜೊತೆಗೆ ಇನ್ನಿಬ್ಬರು ವ್ಯಕ್ತಿಗಳು ಬಂದು ಕೃತ್ಯಕ್ಕೆ ಸಾಥ್ ನೀಡಿದ್ದಾರೆ ಎಂದು ಭೀಮರಾವನ ತಾಯಿ ನಾಗಮ್ಮ ಮುಡಬಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಮುಡಬಿ ಠಾಣೆ ಪೊಲೀಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.