ಬೀದರ್ : ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಬಸವಕಲ್ಯಾಣ ನಗರದ ಥೇರ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಅವರ ನಾಮಪತ್ರ ಸಲ್ಲಿಕೆ ನಿಮಿತ್ತವಾಗಿ ಆಯೋಜಿಸಲಾದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಬಸವಕಲ್ಯಾಣದಲ್ಲಿ ಮಾಲಾ ಗೆಲುವು ಅಲ್ಲದೆ ಉಪ ಚುನಾವಣೆಯ ಎಲ್ಲಾ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದರು.
ಆಡಳಿತಾರೂಢ ಬಿಜೆಪಿ ಸರ್ಕಾರದ ವೈಫಲ್ಯ ಹಾಗೂ ದಿ.ಬಿ ನಾರಾಯಣರಾವ್ ಅವರ ಜನಪರ ಕಾಳಜಿಯನ್ನು ಜನ ಮರೆತಿಲ್ಲ. ಹೀಗಾಗಿ, ಈ ಉಪ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಲಿದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಡವರ ಪಾಲಿನ ಯೋಜನೆಗಳನ್ನು ಬಿಜೆಪಿ ಮೊಟುಕುಗೊಳಿಸಿದೆ. ಉಪ ಚುನಾವಣೆಯ ಎಲ್ಲಾ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು. ಇದಕ್ಕೂ ಮೊದಲು ತೆರೆದ ವಾಹನದಲ್ಲಿ ಅಭ್ಯರ್ಥಿ ಮಾಲಾ ನಾರಾಯಣರಾವ್ ಅವರೊಂದಿಗೆ ಪಕ್ಷದ ನಾಯಕರು ನಗರದ ವಿವಿಧ ಬಡಾವಣೆಗಳ ಮೂಲಕ ಥೇರ್ ಮೈದಾನದವರೆಗೆ ಮೆರವಣಿಗೆ ನಡೆಸಿದರು. ಸಮಾವೇಶದ ನಂತರ ಸರಳವಾಗಿ ನಾಮಪತ್ರ ಸಲ್ಲಿಕೆ ಮಾಡಲಾಯಿತು.
ಇದನ್ನೂ ಓದಿ.. ರೌಡಿ ಶೀಟರ್ ಕೊಲೆ ಬೆನ್ನಲ್ಲೇ ಬೆಂಬಲಿಗರಿಂದ ಕಂಡ ಕಂಡವರ ಮೇಲೆ ಹಲ್ಲೆ: ನೂರಾರು ವಾಹನಗಳು ಜಖಂ