ಬೀದರ್: ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಿಂದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಂಡನೆ ಮಾಡಲಿರುವ ಪೂರ್ಣಾವಧಿ ಬಜೆಟ್ ಮೇಲೆ ಜಿಲ್ಲೆಯ ಜನರು ಚಾತಕ ಪಕ್ಷಿಯಂತೆ ಕಾಯುತ್ತಾ, ಈ ಬಾರಿಯಾದ್ರು ಜಿಲ್ಲೆಗೆ ಬಂಪರ್ ಕೊಡುಗೆ ಸಿಗಲಿದೆ ಎಂಬ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಮಹಾರಾಷ್ಟ್ರ, ತೆಲಂಗಾಣ ಗಡಿ ಭಾಗದಲ್ಲಿರುವ ಬಹುಮನಿ ಸುಲ್ತಾನರು, ಕಲ್ಯಾಣಿ ಚಾಲುಕ್ಯರು, ನಿಜಾಮರು ಆಳಿದ ಐತಿಹಾಸಿಕ ಪ್ರಸಿದ್ಧ ಜಿಲ್ಲೆಯಲ್ಲಿ ಅನ್ಯ ಭಾಷೆಗಳ ಪ್ರಭಾವ ಹೆಚ್ಚಾಗಿ ಕನ್ನಡ ಭಾಷೆಯ ಬೆಳವಣಿಗೆಯಾಗದೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಸಮಾನತೆ ಇಂದಿಗೂ ಜನರನ್ನ ಕಾಡ್ತಿದೆ. ಹೇಳಿಕೊಳ್ಳುವಂತೆ ನೀರಾವರಿ ಯೋಜನೆಗಳಿಲ್ಲದೆ ಅನ್ನದಾತರು ಒಣ ಬೇಸಾಯ ಕೃಷಿ ಪದ್ಧತಿಯಿಂದ ಕೈ ಸುಟ್ಟುಕೊಂಡು ಕಂಗಾಲಾಗಿ ಹೊಗಿದ್ದಾರೆ. ಕೈಗಾರಿಕೋದ್ಯಮ ಇಲ್ಲದಕ್ಕೆ ಸಾವಿರಾರು ಯುವಕರು ನಿರೂದ್ಯೋಗಿಗಳಾಗಿ ಮಹಾನಗರಗಳತ್ತ ಗುಳೆ ಹೊರಟು ಹೋಗಿದ್ದಾರೆ. ಅಂತರ್ಜಲ ಮಟ್ಟ ಕುಸಿದು ಪ್ರತಿ ವರ್ಷ ಚಳಿಗಾಲದಲ್ಲೆ ಭಯಂಕರ ಬರಗಾಲ ಎದುರಿಸುವುದು ಸಾಮಾನ್ಯವಾಗಿದೆ. ಹೀಗೆ ನೂರಾರು ಸಮಸ್ಯೆಗಳ ನಡುವೆ ಈ ಬಾರಿಯಾದ್ರೂ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನಿರೀಕ್ಷೆ ಮಾಡುತ್ತಿದ್ದಾರೆ ಜನ.
ಜನರ ನಿರೀಕ್ಷೆಗಳೇನು?
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮಂಡನೆ ಮಾಡಲಿರುವ ಬಜೆಟ್ನಲ್ಲಿ ಸಾಲಮನ್ನಾ, ಸರ್ಕಾರಿ ನೌಕರರ ವೇತನ ಹೆಚ್ಚಳ ಸಾಮಾನ್ಯವಾಗಿ ಕಂಡು ಬರಬಹುದು. ಆದರೆ ಜಿಲ್ಲೆಯಲ್ಲಿ ತಾಂಡವಾಡ್ತಿರುವ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ವಿಶೇಷ ಅನುದಾನ, ಕೈಗಾರಿಕೋದ್ಯಮ ಸ್ಥಾಪನೆ, ಅವಸಾನದ ಅಂಚಿನಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳಾದ ನಾರಂಜಾ, ಮಹಾತ್ಮ ಗಾಂಧಿ, ಬಿಎಸ್ಎಸ್ಕೆ ಪುನರುದ್ಧಾರ, ಮಾಂಜ್ರಾ ನದಿಗೆ ಅಡ್ಡಲಾಗಿ ಹೊಸ ಬ್ಯಾರೇಜ್ಗಳ ನಿರ್ಮಾಣ, ಕೆರೆಗಳ ನಿರ್ಮಾಣ, ಕಾರಂಜಾ ಜಲಾಶಯದ ಅಭಿವೃದ್ಧಿ ಸೇರಿದಂತೆ ಕೃಷಿ ವಲಯ, ಮಹಿಳೆಯರ ಸಮಗ್ರ ಅಭಿವೃದ್ಧಿ, ಅಂಗನವಾಡಿ ಕಾರ್ಯಕರ್ತೆಯರ ಸೇವಾ ಭದ್ರತೆ ಕುರಿತು ಜನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.