ಬಸವಕಲ್ಯಾಣ: ರಾತ್ರಿ ಮಲಗಿದ್ದ ವ್ಯಕ್ತಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಸುಟ್ಟು ಭಸ್ಮವಾದ ಘಟನೆ ನಗರದ ಹಲಸೂರು ರಸ್ತೆಯಲ್ಲಿರುವ ಶಾಪುರ್ ಬಡಾವಣೆಯಲ್ಲಿ ನಡೆದಿದೆ.
ನಗರದ ತ್ರಿಪುರಾಂತ ನಿವಾಸಿ ಬಸಿರೋದ್ದಿನ್ ನಿಲಂಗೆಕರ್ (65) ಮೃತ ವ್ಯಕ್ತಿ. ಹಲಸೂರು ರಸ್ತೆಯಲ್ಲಿರುವ ಕಟ್ಟಿಗೆ ಕೊಯ್ಯುವ ಕಾರ್ಖಾನೆಯಲ್ಲಿ ರಾತ್ರಿ ಪಾಳಿ ವಾಚ್ಮನ್ ಆಗಿ ಕೆಲಸ ಮಾಡುತ್ತಿದ್ದ ಈತ, ಅಲ್ಲೇ ಇದ್ದ ಕಬ್ಬಿಣದ ಮಂಚದ ಮೇಲೆ ಮಲಗಿದ್ದಾನೆ. ಮಂಚದ ಪಕ್ಕದ ಗೋಡೆಯಿಂದ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಮಂಚಕ್ಕೆ ತಾಗಿದೆ. ಹೀಗಾಗಿ ಮಲಗಿದ ಸ್ಥಿತಿಯಲ್ಲಿಯೇ ಆತನ ದೇಹ ಸಂಪೂರ್ಣ ಭಸ್ಮವಾಗಿದ್ದು, ವಿದ್ಯುತ್ ನಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ.
ಸುದ್ದಿ ತಿಳಿದ ನಗರ ಠಾಣೆ ಪಿಎಸ್ಐ ಸುನೀಲ್ ಕುಮಾರ್ ಹಾಗೂ ಜೆಸ್ಕಾಂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಮೃತ ವ್ಯಕ್ತಿ ದೇಹ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಕಾರಣ ಸ್ಥಳದಲ್ಲೇ ವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಶಾಸಕರಿಂದ 50 ಸಾವಿರ ಪರಿಹಾರ: ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ಬಿ.ನಾರಾಯಣರಾವ್ ಭೇಟಿ ನೀಡಿ ಮಾಹಿತಿ ಪಡೆದರು. ನಂತರ ಮೃತ ವ್ಯಕ್ತಿ ಕುಟುಂಬದ ಸದಸ್ಯರಿಗೆ ವೈಯಕ್ತಿಕವಾಗಿ 50 ಸಾವಿರ ರೂ. ಪರಿಹಾರ ಧನ ನೀಡುವುದಾಗಿ ಘೋಷಿಸಿದ್ದಾರೆ.