ಬೀದರ್: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಬಳಿ ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ ಬೀದರ್ ಮೂಲದ ಸಿಆರ್ಪಿಎಫ್ ಯೋಧ ಮನೋಹರ್ ಕುಟುಂಬಕ್ಕೆ ಸಂಸದ ಭಗವಂತ ಖೂಬಾ ಆತಿಥ್ಯ ನೀಡಿ ಗೌರವಿಸಿದ್ದಾರೆ.
ಬೀದರ್ ಸಂಸದ ಭಗವಂತ ಖೂಬಾ ಪತ್ನಿ ಸಮೇತವಾಗಿ ಶಿವನಗರ ನಿವಾಸದಲ್ಲಿ ಯೋಧ ಮನೋಹರ್ ರಾಠೋಡ್ ಹಾಗೂ ಕುಟುಂಬಸ್ಥರಿಗೆ ಕುಂಕುಮ, ಹೂವಿನ ಹಾರ ಹಾಕಿ ಸನ್ಮಾನ ಮಾಡಿ ಸ್ವಾಗತಿಸಿದರು. ಅಲ್ಲದೆ ಮನೆಯಲ್ಲೇ ಯೋಧರ ಕುಟುಂಬದೊಂದಿಗೆ ಊಟ ಮಾಡಿದರು.
ಅಂದು ಉಗ್ರರು ನಡೆಸಿದ ದುಷ್ಕೃತ್ಯದಲ್ಲಿ ಯೋಧ ಮನೋಹರ್ ಕಾಲು, ಕಣ್ಣಿಗೆ ಗಾಯವಾಗಿತ್ತು. ವೈದ್ಯಕೀಯ ರಜೆ ಮೇಲೆ ಸ್ವಗ್ರಾಮ ಭಾಲ್ಕಿ ತಾಲೂಕಿನ ಸೇವಾಲಾಲ್ ತಾಂಡಕ್ಕೆ ಬಂದಿದ್ದ ಯೋಧರ ಮನೆಗೆ ಭೇಟಿ ನೀಡಿದ್ದ ಸಂಸದ ಭಗವಂತ ಖೂಬಾ ನಿನ್ನೆ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. ಈ ವೇಳೆ ಯೋಧರ ಧೈರ್ಯವನ್ನು ಕೊಂಡಾಡಿ ಸಂಸದರ ಕುಟುಂಬ ಗೌರವಿಸಿತು.