ಬೀದರ್: ಭಾಲ್ಕಿ ನಗರ ಪೊಲೀಸ್ ಠಾಣೆಯ ಸಿಪಿಐ ಪಿ.ಆರ್.ರಾಘವೇಂದ್ರ ಅವರು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಕೂಡಲೇ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.
ಶಿಸ್ತು, ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರಿಗೆ ಅಪಾರ ಗೌರವ ಇದೆ. ಆದರೆ, ಕೆಲ ಪೊಲೀಸ್ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿ ಅಂತಹ ಇಲಾಖೆಗೆ ಕಳಂಕ ತರುವ ಕೆಲಸ ಮಾಡುತ್ತಿರುವುದು ನೋವಿನ ಸಂಗತಿ.
ಕೆಲ ತಿಂಗಳ ಹಿಂದೆ ಇಲ್ಲಿನ ನಗರ ಪೊಲೀಸ್ ಠಾಣೆಗೆ ಸಿಪಿಐ ಆಗಿ ನಿಯೋಜನೆಗೊಂಡಿರುವ ಪಿ.ಆರ್.ರಾಘವೇಂದ್ರ ಅವರ ಮೇಲೆ ಮೊದಲಿನಿಂದಲೂ ಲಂಚದ ಆರೋಪ ಕೇಳಿ ಬರುತ್ತಿದೆ. ಜನರಿಗೆ ಅನಗತ್ಯ ಕಿರುಕುಳ ನೀಡುವುದು, ಸಣ್ಣಪುಟ್ಟ ವಿಷಯಗಳಿಗೆ ತೊಂದರೆ ಕೊಡುತ್ತಿರುವುದು, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಬಡ ಜನರಿಗೂ ಹಣದ ಬೇಡಿಕೆ ಈಡುತ್ತಿರುವ ಬಗ್ಗೆ ಜನರು ನನ್ನ ಗಮನಕ್ಕೆ ತಂದಿದ್ದಾರೆ ಎಂದು ಖಂಡ್ರೆ ಹೇಳಿದ್ದಾರೆ.
ಈ ಕುರಿತು ಸಾಕಷ್ಟು ಸಲ ಅವರನ್ನು ಕರೆಸಿ ಎಚ್ಚರಿಕೆ ನೀಡಿ ತಮ್ಮ ನಡವಳಿಕೆಯಲ್ಲಿ ಸುಧಾರಣೆ ತಂದು ಕೊಳ್ಳುವಂತೆ ತಿಳಿ ಹೇಳಿದ್ದೇನೆ. ಆದರೂ ಅವರು ಎಚ್ಚೆತ್ತುಕೊಳ್ಳದಂತೆ ಕಾಣುತ್ತಿಲ್ಲ. ಇಂತಹ ಅಧಿಕಾರಿಗಳಿಂದ ಜನರ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಎನ್ನುವುದು ಕನಸಿನ ಮಾತು.
ವ್ಯಕ್ತಿಯೊಬ್ಬರಿಂದ ಸಿಪಿಐ ಅವರು ಸಮವಸ್ತ್ರದಲ್ಲೇ ಲಂಚ ಪಡೆಯುತ್ತಿರುವ ದೃಶ್ಯ ವೈರಲ್ ಆಗಿರುವುದನ್ನ ನೋಡಿದ್ರೆ ಸಾರ್ವಜನಿಕರ ರಕ್ಷಣೆ ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ. ಕೂಡಲೇ ಮೇಲಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.