ಬಸವಕಲ್ಯಾಣ (ಬೀದರ್): ತಾಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಚರ್ಚೆಗಳಿಗೆ ವೇದಿಕೆಯಾಗಬೇಕಿದ್ದ ಸಭೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಚ್ಚಾಡಿಕೊಂಡ ಪ್ರಸಂಗ ನಗರದ ತಾಲೂಕು ಪಂಚಾಯ್ತಿಯಲ್ಲಿ ಜರುಗಿತು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಯಶೋದ ನೀಲಕಂಠ ರಾಠೋಡ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಳೀಯ ಶಾಸಕ ಬಿ. ನಾರಾಯಣರಾವ್ ಕೂಡ ಭಾಗವಹಿಸಿದ್ದರು. ಅವರ ಸಮ್ಮುಖದಲ್ಲಿಯೇ ಅನುದಾನ ಲ್ಯಾಪ್ಸ್ ಆಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಜನ ಪ್ರತಿನಿಧಿಗಳು ಹಾಗೂ ತಾಪಂ ಇಓ ಮಧ್ಯೆ ವಾಗ್ವಾದ ನಡೆದು, ಪರಸ್ಪರ ತೀರ ಖಾಸಗಿಯಾಗಿ ನಿಂದಿಸಿಕೊಳ್ಳಲು ಮುಂದಾಗಿದ್ದು ಕಂಡುಬಂತು.
ತಾಲೂಕು ಪಂಚಾಯ್ತಿಯ ಲಿಂಕ್ ಡಾಕ್ಯುಮೆಂಟ್ಸ್ ಹಾಗೂ ಸ್ಟ್ಯಾಂಪ್ ಡ್ಯೂಟಿ ಅನುದಾನದ 1.30 ಕೋಟಿಗೂ ಅಧಿಕ ಹಣ ವಾಪಸ್ ಹೋಗಿದೆ. ನಿಗದಿತ ಸಮಯದಲ್ಲೇ ಕೆಲಸ ಮಾಡಿದರೂ ಬಿಲ್ ಪಾವತಿಸಿಲ್ಲ. ತಾಪಂ ಇಓ ನಿರ್ಲಕ್ಷ್ಯದಿಂದಾಗಿ ಈಗ ಕೆಲಸ ಮಾಡಿದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದಕ್ಕೆ ಇಓ ಅವರೆ ಸಂಪೂರ್ಣ ಹೊಣೆಗಾರರು ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಓಂ ಪ್ರಕಾಶ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ಯಶೋದ ನೀಲಕಂಠ ರಾಠೋಡ ಸೇರಿದಂತೆ ಬಹುತೇಕ ಸದಸ್ಯರು ಮೇಜು ತಟ್ಟುವ ಮೂಲಕ ಸ್ಥಾಯಿ ಸಮಿತಿ ಅಧ್ಯಕ್ಷರ ಆರೋಪಕ್ಕೆ ಬೆಂಬಲ ಸೂಚಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಇಓ ಮಡೋಳಪ್ಪ ಪಿ. ಎಸ್. ಅವರು ಸಭೆಯಲ್ಲಿ ಯಾರ ಬಗ್ಗೆಯೂ ವೈಯಕ್ತಿಕವಾಗಿ, ಅದರಲ್ಲೂ ಹೆಸರು ಉಲ್ಲೇಖಿಸಿ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಇನ್ನೂ ಮಾತಿನ ಚಕಮಕಿ ಮುಂದುವರೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ವೇಳೆ ಶಾಸಕ ಬಿ. ನಾರಾಯಣರಾವ್ ಮಧ್ಯ ಪ್ರವೇಶಿಸಿ, ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಬೇಕಿದ್ದ ಸಭೆಯಲ್ಲಿ ಈ ರೀತಿ ಪರಸ್ಪರ ನಿಂದನೆ ಮಾಡಿಕೊಂಡು ಗದ್ದಲ ಮಾಡುವುದು ಸರಿಯಲ್ಲ. ಇಲ್ಲಿ ಮಾಧ್ಯಮದವರು ಇದ್ದಾರೆ ಎನ್ನುವುದು ಗಮನದಲ್ಲಿರಲಿ ಎಂದರು.
ಜೊತೆಗೆ, ಅನುದಾನ ಲ್ಯಾಪ್ಸ್ ಆಗಿರುವುದಕ್ಕೆ ಮುಖ್ಯ ಕಾರಣವೇನು ಎಂಬುದರ ವಿವರಣೆಯನ್ನು ಸಂಬಂಧಿಸಿದ ಅಧಿಕಾರಿಗಳಿಂದ ಪಡೆದ ಶಾಸಕರು, ಮೇಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಅನುದಾನ ಮರು ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ ಸದಸ್ಯರನ್ನು ತಣ್ಣಗಾಗಿಸಿದರು.