ಬೀದರ್: ಕೊರೊನಾದಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ಮುಂಜಾಗ್ರತೆ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ವಠಾರ ಶಿಕ್ಷಣ ಎಂಬ ನೂತನ ಪರಿಕಲ್ಪನೆಯನ್ನು ಜಾರಿಗೆ ತಂದಿದೆ. ಈ ನೂತನ ಪ್ರಯತ್ನಕ್ಕೆ ಬೀದರ್ನಲ್ಲಿ ಅಪಾರ ಯಶಸ್ಸು ದೊರೆತಿದೆ.
ಈ ವಠಾರ ಶಿಕ್ಷಣ ಪರಿಕಲ್ಪನೆಯಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪಾಠ ಕೇಳುವ ಕಾರಣದಿಂದಾಗಿ ಕೋವಿಡ್ ಭೀತಿ ಅಷ್ಟಾಗಿ ಇರುವುದಿಲ್ಲ. ಔರಾದ್ ತಾಲೂಕಿನ ಡೋಂಗರಗಾಂವ್ ಗ್ರಾಮದಲ್ಲಿ ಇದರ ಪ್ರಯೋಗ ಯಶಸ್ವಿಯಾಗಿದೆ.
ಬೀದರ್ ಜಿಲ್ಲೆಯ ಒಟ್ಟು 1.68 ಲಕ್ಷ ವಿದ್ಯಾರ್ಥಿಗಳ ಪೈಕಿ 1,13,000 ವಿದ್ಯಾರ್ಥಿಗಳಿಗೆ ವಠಾರ ಶಾಲೆಯ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಸುಮಾರು 7,013 ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾರೆ. ಸಮುದಾಯ ಕೇಂದ್ರ, ಮಸೀದಿ, ಚರ್ಚ್, ಮಂದಿರ, ಆಲದ ಮರ, ಬಯಲು ಪ್ರದೇಶಗಳಲ್ಲಿ ಕೋವಿಡ್ ನಿಯಮಗಳ ಅನುಸಾರ ಪಾಠ ಬೋಧನೆ ನಡೆಯುತ್ತದೆ.
ಈಗ ವಠಾರ ಶಾಲಾ ಶಿಕ್ಷಣ ಪದ್ಧತಿ ಯಶಸ್ವಿಯಾಗಿದ್ದು, ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ ಹೇಳಿದ್ದಾರೆ.
ಈಗಾಗಲೇ ಕಾಲ್ಪನಿಕ ಶಾಲೆ ಎಂಬ ಹೆಸರಿನಲ್ಲಿ ಡಿಜಿಟಲ್ ಶಿಕ್ಷಣ ಕೂಡ ವಠಾರ ಶಾಲೆಯಲ್ಲಿ ನೀಡಲಾಗ್ತಿದೆ. ಗರಿಷ್ಠ ಮಟ್ಟದಲ್ಲಿ ಮಕ್ಕಳು ಹಾಜರಾಗಿದ್ದು, ಸಾಕಷ್ಟು ಸಂತಸ ತಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹೆಚ್.ಸಿ.ಚಂದ್ರಶೇಖರ್ ತಿಳಿಸಿದ್ದಾರೆ.