ಬೀದರ್: ಜಿಲ್ಲಾಮಟ್ಟದ ಕ್ರೀಡಾಕೂಟದ ವೇಳೆ ನಾಡಗೀತೆ ಹಾಡುತ್ತಿದ್ದಾಗ ಮೂತ್ರ ವಿಸರ್ಜನೆ ಮಾಡಿ ಅಸಭ್ಯ ವರ್ತನೆ ತೋರಿದ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಬೀದರ್ನ ಪಶು ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ 2019-20ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಈ ಘಟನೆ ನಡೆದಿತ್ತು. ಕ್ರೀಡಾಕೂಟದಲ್ಲಿ ನಾಡಗೀತೆ ಹಾಡುವಾಗ ಔರಾದ್ ತಾಲೂಕಿನ ಹಿಪ್ಪಳಗಾಂವ ಸರ್ಕಾರಿ ಶಾಲೆಯ ಶಿಕ್ಷಕ ವಿರೇಶ ಹಾಗೂ ಗಂಗಾರಾಮ ತಾಂಡ ಸರ್ಕಾರಿ ಶಾಲೆಯ ಶಿಕ್ಷಕ ವಿಜಯಕುಮಾರ ರಾಠೋಡ್ ಎಂಬುವರು ಮೂತ್ರ ವಿಸರ್ಜನೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಇಬ್ಬರು ಶಿಕ್ಷಕರನ್ನು ಬೀದರ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಶಿಕ್ಷಕರು ಅದೇ ಪ್ರಾಂಗಣದಲ್ಲಿ ಮೂತ್ರವಿಸರ್ಜನೆ ಮಾಡಿ ನಾಡಗೀತೆ ಹಾಗೂ ಕ್ರೀಡಾಕೂಟಕ್ಕೆ ಶಿಕ್ಷಣ ಇಲಾಖೆಗೆ ಅವಮಾನಿಸಿದ್ದಾರೆ ಎಂದು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.