ಬೀದರ್: ಅಗ್ನಿಪಥ ಯೋಜನೆಯಡಿ ರಾಜ್ಯದಲ್ಲಿ ಮೊದಲ ಬಾರಿಗೆ ಗಡಿ ಜಿಲ್ಲೆ ಬೀದರ್ನಲ್ಲಿ ಸೇನಾ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ವಿವಿಧೆಡೆಯಿಂದ 72 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಬೆಳಗಾವಿ ಜಿಲ್ಲೆಯಿಂದಲೇ 50 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು ವಿಶೇಷ.
ಡಿ.5 ರಿಂದ ನೇಮಕಾತಿ ಆರಂಭಗೊಂಡಿದ್ದು, ಡಿ.22 ರವರೆಗೆ ನಡೆಯಲಿದೆ. ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಭಾರಿ ಚಳಿ, ತಂಪು ಗಾಳಿಯ ನಡುವೆಯೂ ಯುವಕರು ಉತ್ಸಾಹದಿಂದ ನೇಮಕಾತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ಸಾಲು - ಸಾಲಾಗಿ ನಿಂತು ಭಾರತೀಯ ಸೇನೆ ಸೇರಲು ಯುವಕರ ಪಡೆ ಕಾತರದಲ್ಲಿದೆ.
ಪ್ರಾರಂಭದಲ್ಲಿ ನೆಹರು ಕ್ರೀಡಾಂಗಣ ಸುತ್ತಮುತ್ತಲೇ ಯುವಕರು ತಂಗುತ್ತಿದ್ದು, ಬೆಳಗಿನ ಜಾವ 4ಕ್ಕೆ ಕ್ಯೂನಲ್ಲಿ ನಿಂತು ಸೇನೆ ಭರ್ತಿಯ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇದೀಗ ವಿವಿಧೆಡೆಯಿಂದ ಆಗಮಿಸುವ ಯುವಕರಿಗಾಗಿ ಜಿಲ್ಲಾಡಳಿತದಿಂದ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಗುರುದ್ವಾರದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಶ್ರೀ ಸಾಯಿ ಶಾಲೆ ಆವರಣದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ. ಅಲ್ಲಿ ಉಪಾಹಾರ, ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ನಿತ್ಯವೂ 3ರಿಂದ 4 ಸಾವಿರ ಯುವಕರನ್ನು ಪರೀಕ್ಷೆ ಮಾಡಲಾಗುತ್ತಿದೆ. ಇದರಲ್ಲಿ ಸುಮಾರು 1 ಸಾವಿರ ಯುವಕರು ವಿವಿಧ ಸ್ಪರ್ಧೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇದನ್ನೂ ಓದಿ: ಅಗ್ನಿಪಥ ಯೋಜನೆಯಡಿ ಸೇನಾ ನೇಮಕಾತಿ.. ಬೀದರ್ನಲ್ಲಿ ರ‍್ಯಾಲಿಗೆ ಹರಿದು ಬಂತು ಯುವಕರ ಪಡೆ