ಬೀದರ್: ಕಾರಂಜಾ ಜಲಾಶಯದ ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ನೀರುಪಾಲಾದ ಇಬ್ಬರು ಸ್ನೇಹಿತರ ಶವ ಪತ್ತೆಯಾಗಿದೆ. ಕಟ್ಟಿ ತೂಗಾಂವ್ ಗ್ರಾಮದ ಯುವಕ ಬಸವರಾಜ ಬುದೆ (16) ಹಾಗೂ ಕಣಜಿ ಗ್ರಾಮದ ಸಾಯಿನಾಥ ಸಂಗನಬಶೆಟ್ಟೆ (17) ಮೃತಪಟ್ಟ ಬಾಲಕರು.
ಹಳ್ಳಿಖೇಡ್ (ಬಿ) ಗ್ರಾಮದ ಶಾಲೆಯಲ್ಲಿ ಈ ಇಬ್ಬರೂ ಸ್ನೇಹಿತರು ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದರು. ಇವರು ಇನ್ನಿಬ್ಬರು ಗೆಳೆಯರೊಂದಿಗೆ ಈಜಾಡಲು ಸಮೀಪದ ಕಾರಂಜಾ ಜಲಾಶಯದ ಬಲದಂಡೆ ಕಾಲುವೆಗೆ ಭಾನುವಾರ ಹೋಗಿದ್ದರು. ಜಲಾಶಯದಿಂದ ಕಾಲುವೆಗೆ ನೀರು ಬಿಟ್ಟಿರುವ ಪರಿಣಾಮ ಹರಿವು ಹೆಚ್ಚಾಗಿತ್ತು. ನೀರಿನ ರಭಸಕ್ಕೆ ಸಿಲುಕಿ ಶಿವಲಿಂಗ ಹಾಗೂ ಸಾಯಿನಾಥ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ.
ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಸಿಪಿಐ ವೀರಣ್ಣ ದೊಡ್ಡಮನಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ಬಗ್ಗೆ ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಹಾರಕ್ಕೆ ಶಾಸಕರ ಆಗ್ರಹ: ಮೃತರ ಎರಡು ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಸರ್ಕಾರ ಇದೊಂದು ವಿಶೇಷ ಪ್ರಕರಣವೆಂದು ಭಾವಿಸಿ ಎರಡೂ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಕೊಡಬೇಕು. ಮುಂದಿನ ದಿನಗಳಲ್ಲಿ ಕಾಲುವೆ ನೀರು ಬಿಡುವ ಮುನ್ನ ಜಿಲ್ಲಾಡಳಿತ ಜನರಿಗೆ ಮಾಹಿತಿ ನೀಡಬೇಕು ಶಾಸಕ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸ್ನಾನಕ್ಕೆಂದು ತುಂಗಾಭದ್ರಾ ನದಿಗಿಳಿದ ಸಹೋದರಿಯರು ನೀರುಪಾಲು: ಸಿಸಿಟಿವಿಯಲ್ಲಿ ದುರ್ಘಟನೆ ಸೆರೆ