ಬೀದರ್: ವರ್ಗಾವಣೆಯಾಗಿ ಬೇರೆ ಶಾಲೆಗೆ ತೆರಳಲಿರುವ ಶಿಕ್ಷಕನನ್ನು ಬಿಟ್ಟಿರಲು ಸಾಧ್ಯವಾಗದ ವಿದ್ಯಾರ್ಥಿಗಳು, ಸಾಮೂಹಿಕವಾಗಿ ಬಿಕ್ಕಿಬಿಕ್ಕಿ ಅತ್ತ ಘಟನೆ ಜಿಲ್ಲೆಯ ಹುಮನಾಬಾದ ತಾಲೂಕಿನ ಕುಮಾರ ಚಿಂಚೋಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಕುಮಾರ ಚಿಂಚೋಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಮಾಧ್ಯಮ ಶಿಕ್ಷಕ ಅನಿಲ ರಾಠೋಡ ಅವರಿಗೆ ಬೇರೆ ಶಾಲೆಗೆ ವರ್ಗಾವಣೆಯಾಗಿದೆ. ಇದರಿಂದ ಬೇಸರಗೊಂಡ ಮಕ್ಕಳು ಅವರನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಅನಿಲ ರಾಠೋಡ ಅವರು ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗುಲ್ಲಳ್ಳಿ ತಾಂಡಾದವರಾಗಿದ್ದಾರೆ. ಕಳೆದ 9 ವರ್ಷದಿಂದ ಇದೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶಾಲೆ ವಿದ್ಯಾರ್ಥಿಗಳೆಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ, ಪಾಠದ ಜೊತೆ ಮಕ್ಕಳ ಮೇಲೆ ಇವರು ತೋರುತ್ತಿದ್ದ ಪ್ರೀತಿ, ವಿಶೇಷ ಕಾಳಜಿ, ಕ್ಲಾಸ್‌ನಲ್ಲಿ ಇವರು ಮಾಡುತ್ತಿದ್ದ ಪಾಠದ ಪ್ರಭಾವಕ್ಕೆ ಒಳಗಾಗಿದ್ದ ವಿದ್ಯಾರ್ಥಿಗಳು, ಅವರನ್ನು ಬಿಟ್ಟಿರಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ತಲುಪಿದ್ದರು.
ಆದರೆ ಅವರ ಸ್ವ ಗ್ರಾಮದಲ್ಲಿದ್ದ ಕುಟುಂಬ ಸದಸ್ಯರನ್ನು ನೋಡಿಕೊಳ್ಳಲು ಸಾಧ್ಯವಾಗದ ಕಾರಣ ಇತ್ತೀಚೆಗೆ ನಡೆದ ವರ್ಗಾವಣೆ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಶಿಕ್ಷಕ ಅನಿಲ ರಾಠೋಡ, ತಮ್ಮೂರಿಗೆ ಸಮೀಪವೆ ಇರುವ ಆಳಂದ ತಾಲೂಕಿನ ರುದ್ರವಾಡಿ ಗ್ರಾಮಕ್ಕೆ ವರ್ಗಾವಣೆಗೊಂಡಿದ್ದಾರೆ.
ಶಾಲೆ ಆವರಣದಲ್ಲಿ ದಿಢೀರನೆ ನಡೆದ ಬೆಳವಣಿಗೆಯಿಂದ ಭಾವೋಗ್ವೇದಕ್ಕೆ ಒಳಗಾದ ಶಿಕ್ಷಕ ಅನಿಲ, ಇಲ್ಲಿಂದ ಹೋಗಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಆದರೆ ವೈಯಕ್ತಿಕ ಕಾರಣದಿಂದ ಇಲ್ಲಿಂದ ವರ್ಗಾವಣೆಯಾಗಿ ಹೋಗಬೇಕಾಗಿದೆ. ನಿಮ್ಮ ಪ್ರೀತಿಗೆ ನಾನು ಯಾವತ್ತು ಚಿರರುಣಿಯಾಗಿದ್ದೇನೆ ಎಂದು ಮಕ್ಕಳನ್ನು ಸಮಾಧಾನ ಪಡಿಸಿದರು.