ಬಸವಕಲ್ಯಾಣ: ಸ್ಥಳೀಯ ಆಡಳಿತದ ಮನವಿಯಂತೆ ಇಲ್ಲಿನ ವ್ಯಾಪಾರಿಯೊಬ್ಬರು 60ಕ್ಕೂ ಅಧಿಕ ಆಕ್ಸಿಜನ್ ಸಿಲಿಂಡರ್‌ಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ ಮೂಲಕ ಕೋವಿಡ್ ಸೋಂಕಿತರಿಗೆ ನೆರವಾಗಿದ್ದಾರೆ.
ನಗರದ ಎಪಿಎಂಸಿ ಪ್ರಾಂಗಣಕ್ಕೆ ಹೊಂದಿಕೊಂಡಿರುವ ಬಾಲಾಜಿ ಮಂದಿರದ ಹಿಂಭಾಗದಲ್ಲಿರುವ ಖಾಸಗಿ ಆಕ್ಸಿಜನ್ ಸಿಲಿಂಡರ್ ವ್ಯಾಪಾರಿ ಚಾರ್‌ಮಿನಾರ್ ಗ್ಯಾಸ್ ವೆಲ್ಡಿಂಗ್ ಅಂಗಡಿ ಮಾಲೀಕ ಸೈಯದ್ ಶಂಸುದ್ದೀನ್ ತಾಲೂಕು ಆಡಳಿತಕ್ಕೆ ಸಿಲಿಂಡರ್ ಒಪ್ಪಿಸಿದ ವ್ಯಾಪಾರಿ. ಗ್ಯಾಸ್ ವೆಲ್ಡಿಂಗ್ ಅಂಗಡಿಯಲ್ಲಿ ಅತ್ಯಧಿಕ ಸಿಲಿಂಡರ್‌ಗಳನ್ನು ಸಂಗ್ರಹಿಸಿ ಇಡಲಾಗಿದೆ ಎನ್ನುವ ಮಾಹಿತಿ ಆಧಾರದ ಮೇಲೆ ಸಹಾಯಕ ಆಯುಕ್ತ ಭುವನೇಶ ಪಾಟೀಲ್ ಅವರ ನಿರ್ದೇಶನದ ಮೇರೆಗೆ ಅಂಗಡಿಗೆ ಭೇಟಿ ನೀಡಿದ ಗ್ರೇಡ್-2 ತಹಶೀಲ್ದಾರ ಪಲ್ಲವಿ ಬೆಳಕೇರೆ, ನಗರ ಠಾಣೆ ಪಿಎಸ್‌ಐ ಬಸವರಾಜ ನೇತೃತ್ವದ ಸಿಬ್ಬಂದಿಯ ತಂಡ, ಕೊರೊನಾ ಸೋಂಕಿತರ ಸಹಾಯಕ್ಕಾಗಿ ಅಂಗಡಿಯಲ್ಲಿನ ಆಕ್ಸಿಜನ್ ಗ್ಯಾಸ್ ಸಿಲಿಂಡರ್‌ಗಳನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರಿಸಬೇಕು ಎಂದು ಅಂಗಡಿ ಮಾಲೀಕನಲ್ಲಿ ಮನವಿ ಮಾಡಿದ್ದರು.
ಅಧಿಕಾರಿಗಳ ಮನವಿ ಸ್ಪಂದಿಸಿದ ಅಂಗಡಿ ಮಾಲೀಕ ತಕ್ಷಣ ತನ್ನಲ್ಲಿದ್ದ ಸಿಲಿಂಡರ್‌ಗಳನ್ನು ಆಡಳಿತಕ್ಕೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ತಕ್ಷಣ ಟೆಂಪೋ ಟ್ರಕ್ ಮೂಲಕ 59 ದೊಡ್ಡ ಸಿಲಿಂಡರ್ ಮತ್ತು 6 ಚಿಕ್ಕ ಸಿಲಿಂಡರ್‌ಗಳನ್ನು ವಾಹನದಲ್ಲಿ ತುಂಬಿಕೊಂಡು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು.
ನಗರದ ಸರ್ಕಾರಿ ಆಸ್ಪತ್ರೆ ಸೇರಿದಂತೆ ನಗರದಲ್ಲಿಯ ವಿವಿಧ ಖಾಸಗಿ ಕೋವಿಡ್ ಸೆಂಟರ್‌ಗಳಲ್ಲಿ ದಾಖಲಾಗಿ ಕೊರೊನಾದಿಂದ ಬಳಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಆಕ್ಸಿಜನ್ ಕೊರತೆ ಉಂಟಾಗುತ್ತಿದೆ. ಹೀಗಾಗಿ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಖಾಸಗಿಯವರಿಂದ ಸಿಲಿಂಡರ್‌ಗಳನ್ನು ಸಂಗ್ರಹಿಸಿ ಇಡಲಾಗುತ್ತಿದೆ. ಆಕ್ಸಿಜನ್ ಕೊರತೆ ಉಂಟಾಗುವ ಆಸ್ಪತ್ರೆಗಳಿಗೆ ಆಡಳಿತದಿಂದಲೇ ಸಿಲಿಂಡರ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.