ಬಸವಕಲ್ಯಾಣ: ಚಿನ್ನಾಭರಣಗಳನ್ನು ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ ಒಡವೆಗಳನ್ನು ಕದ್ದು ಖದೀಮರು ಪರಾರಿಯಾದ ಘಟನೆ ನಗರದ ಕಾಳಿ ಗಲ್ಲಿಯಲ್ಲಿ ನಡೆದಿದೆ.
ಕಾಳಿ ಗಲ್ಲಿಯ ನಿವಾಸಿ ನಿವೃತ್ತ ಶಿಕ್ಷಕ ರೇವಣಪ್ಪ ವಾಂಜರಖೇಡೆ ಎಂಬುವರ ಮನೆಗೆ ಚಿನ್ನಾಭರಣ ಪಾಲಿಶ್ ಮಾಡುವವರು ಎಂದು ಹೇಳಿಕೊಂಡು ಇಬ್ಬರು ಯುವಕರು ಬಂದಿದ್ದಾರೆ. ಮೊದಲಿಗೆ ಬೆಳ್ಳಿ ಚೈನ್ ಪಾಲಿಶ್ ಮಾಡಿದ್ದಾರೆ. ನಂತರ ಚಿನ್ನಾಭರಣಗಳನ್ನು ಪಾಲಿಶ್ ಮಾಡಲು ಕೇಳಿ, ಒಡವೆಗಳನ್ನು ನೀರಿನಲ್ಲಿ ಕುದಿಸಿದರೆ ಹೆಚ್ಚಿನ ಹೊಳಪು ಬರುವುದಾಗಿ ನಂಬಿಸಿದ್ದಾರೆ. ಖದೀಮರ ಮಾತು ಕೇಳಿ ಮನೆಯವರು ಅದರಂತೆ ಡಬ್ಬಿಯಲ್ಲಿ 5 ತೊಲಾದ ಚಿನ್ನದ ಸರಗಳನ್ನು ಹಾಕಿ ಗ್ಯಾಸ್ ಮೇಲೆ ಕುದಿಸಲು ಇಟ್ಟಿದ್ದಾರೆ.
ಕೆಲ ಹೊತ್ತಿನಲ್ಲಿ ಒಬ್ಬ ಯುವಕ ಅಡುಗೆ ಮನೆ ಒಳಗೆ ಬಂದು ನಾನು ನೋಡಬೇಕು ಎಂದಾಗ, ಮಹಿಳೆ ಡಬ್ಬಾದಲ್ಲಿ ಸರಗಳನ್ನು ತೋರಿಸಿದ್ದಾರೆ. ಡಬ್ಬಾದ ಮೇಲೆ ಮುಚ್ಚಿ ಕುದಿಸಿದಲ್ಲಿ ಇನ್ನಷ್ಟು ಹೊಳಪು ಬರುತ್ತದೆ. ಡಬ್ಬದ ಮೇಲಿನ ಮುಚ್ಚಳಿಕೆ ತನ್ನಿ ಎಂದು ಹೇಳಿದ್ದಾನೆ. ಆತನ ಮಾತು ನಂಬಿದ ಮಹಿಳೆ ಪಕ್ಕದ ಕೋಣೆಗೆ ತೆರಳಿ ಮುಚ್ಚಳ ತೆಗೆದುಕೊಂಡು ಬರುಷ್ಟರಲ್ಲಿ ಸರಗಳನ್ನು ಕದ್ದು ಕಳ್ಳರು ಪರಾರಿಯಗಿದ್ದಾರೆ ಎನ್ನಲಾಗಿದೆ.