ಬೀದರ್: ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿದೆ. ಮನೆಗೆ ವಾಪಸ್ಸಾಗಬೇಕಾದ ಯುವಕನೊಬ್ಬ ಅನುಮಾನಾಸ್ಪದವಾಗಿ ಕಾಣೆಯಾಗಿದ್ದು, ಮಳೆ ನೀರಿನಲ್ಲಿ ಕೊಚ್ಚಿ ಹೊಗಿರುವ ಶಂಕೆ ವ್ಯಕ್ತವಾಗಿದೆ.
ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಲಿಂಗಾನಂದ ಸ್ವಾಮಿ (26) ಎಂಬ ಯುವಕ ಸೆಪ್ಟೆಂಬರ್ 16ರಂದು ಪಟ್ಟಣದಿಂದ ಮನೆಗೆ ವಾಪಸ್ಸಾಗುವ ವೇಳೆ ಮನೆಯವರಿಗೆ ಕರೆ ಮಾಡಿ, 'ಭಾರಿ ಮಳೆ ಬರುತ್ತಿದೆ. ಮಳೆ ಕಡಿಮೆ ಆದ ಮೇಲೆ ಬರುತ್ತೇನೆ' ಎಂದಿದ್ದನಂತೆ. ಈ ಬಳಿಕ ಯುವಕನ ಫೋನ್ ಸ್ವೀಚ್ ಆಫ್ ಆಗಿದೆ. ಇಲ್ಲಿಯವರಗೂ ಆತ ಮನೆಗೆ ಬಂದಿಲ್ಲ ಎಂದು ಕುಟುಂಬಸ್ಥರು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಮುಂದೆ ಅಳಲು ತೊಡಿಕೊಂಡಿದ್ದಾರೆ.
ಅತಿವೃಷ್ಠಿ ವಿಕ್ಷಣೆಗೆ ಈಶ್ವರ ಖಂಡ್ರೆ ಅವರು ಬ್ಯಾಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ, ಕುಟುಂಬಸ್ಥರು ತಮ್ಮ ಮಗನನ್ನು ಹುಡುಕಿಕೊಡಿ ಎಂದು ಕಣ್ಣಿರು ಹಾಕಿದ್ದಾರೆ. ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅವರು ಈಗಾಗಲೇ ಜಿಲ್ಲೆಯಾದ್ಯಂತ ಪೊಲೀಸರು, ಅಧಿಕಾರಿಗಳು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರ ಸಹಕಾರದಿಂದ ನಾಪತ್ತೆಯಾದ ಯುವಕನ ಪತ್ತೆಗೆ ಮುಂದಾಗಿದ್ದಾರೆ ಎಂದರು.