ಬಸವಕಲ್ಯಾಣ : ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಬ್ಬಿಣದ ಡಿವೈಡರ್ಗೆ ಡಿಕ್ಕಿಯಾದ ಪರಿಣಾಮ ಹಿಂಬದಿ ಸವಾರನ ಕಾಲು ತುಂಡಾದ ಘಟನೆ ತಾಲೂಕಿನ ತಡೋಳಾ ಸಮೀಪ ನಡೆದಿದೆ. ಮತ್ತೋರ್ವ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬಸವಕಲ್ಯಾಣ ತಾಲೂಕಿನ ಇಲ್ಲಾಳ ಗ್ರಾಮದ ಅಂಬಾದಾಸ ಮೇತ್ರೆ, ಚಂದ್ರಕಾಂತ ತ್ರೀಮುಖೆ ಘಟನೆಯಲ್ಲಿ ಗಾಯಗೊಂಡ ಬೈಕ್ ಸವಾರರು. ಚಿಟಗುಪ್ಪಾದಿಂದ ಗ್ರಾಮಕ್ಕೆ ಬರುವ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ-65ರಲ್ಲಿ ಈ ಘಟನೆ ನಡೆದಿದೆ.
ವೇಗವಾಗಿ ಬಂದ ಬೈಕ್ ತಡೋಳಾ ಬಳಿ ನಿಯಂತ್ರಣ ತಪ್ಪಿ ರಸ್ತೆ ಬದಿ ಹಾಕಲಾಗಿದ್ದ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಹಿಂಬದಿ ಸವಾರ ಅಂಬಾದಾಸ ಮೇತ್ರೆ ಎನ್ನುವರ ಎಡಗಾಲು ಸಂಪೂರ್ಣ ತುಂಡಾಗಿದೆ.
ಗಾಯಾಳುಗಳಿಗೆ ಬಸವಕಲ್ಯಾಣ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಉಮ್ಮರ್ಗಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸಂಚಾರಿ ಠಾಣೆ ಪಿಎಸ್ಐ ಕಾಶಿನಾಥ ರೋಳಾ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.