ಬಸವಕಲ್ಯಾಣ: ತಾಲೂಕಿನ ನಿರಗುಡಿ ಗ್ರಾಮ ಪಂಚಾಯತ್ ಪ್ರಭಾರಿ ಪಿಡಿಒ ಶಿವಪುತ್ರ ಅವರನ್ನು ಜಿಲ್ಲಾ ಪಂಚಾಯತ್ ಸಿಇಒ ಜ್ಞಾನೇಂದ್ರಕುಮಾರ ಗಂಗವಾರ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಯರಂಡಿಗಿ ಗ್ರಾಮ ಪಂಚಾಯತ್ನಲ್ಲಿ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದಾಗ 14ನೇ ಹಣಕಾಸು ಯೋಜನೆಯಡಿ 22ಲಕ್ಷ ರೂ. ಕಾಮಗಾರಿ ಹಣವನ್ನು ಅವ್ಯವಹಾರ ಮಾಡಿರುವುದು ಸಾಬೀತಾಗಿದೆ ಎನ್ನಲಾಗ್ತಿದೆ. ತಾಲೂಕು ಪಂಚಾಯತ್ ಇಒ ಮಡೋಳಪ್ಪ ಪಿಎಸ್ ಅವರು ಈ ಹಣದ ದಾಖಲಾತಿ ನೀಡುವಂತೆ ಅವರಿಗೆ ಕಾಲಾವಕಾಶ ನೀಡಿದ್ದರು. ಆದರೆ ದಖಲಾತಿ ಸಲ್ಲಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಇಒ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಕರ್ನಾಟಕ ಪಂಚಾಯತ್ರಾಜ್ ಅಧಿನಿಯಮ 1993 ಹಾಗೂ ಕರ್ನಾಟಕ ಆರ್ಥಿಕ ನೀತಿ ಸಂಹಿತೆ (ಕೆ.ಎಫ್.ಸಿ) ಮತ್ತು 14ನೇ ಹಣಕಾಸು ಬಳಕೆ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ, ಸರ್ಕಾರ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿದ್ದರ ಸಂಬಂಧ ಶಿವಪುತ್ರ ಅವರ ವಿರುದ್ಧ ಕೆ.ಸಿ.ಎಸ್.ಆರ್ ನಿಯಮದಂತೆ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.