ಬಸವಕಲ್ಯಾಣ: ನಾವು ಬಹಳ ಕಷ್ಟಡ್ತಿದ್ದೀವಿ ನೋಡ್ರಿ ಸರ್, ನಾ ಕೂಲಿ ಮಾಡಿ ಊಟ ಮಾಡ್ತೀನಿ, ಆದ್ರೂ ನನಗೆ ಬಡಿಗಿ ತಗೊಂಡು ಹೊಡಿತಾನೆ. ನಿಮ್ಗೆ ಕೈ ಮುಗಿದು ಹೇಳ್ತೀನಿ. ದಯವಿಟ್ಟು ಸರಾಯಿ ಬಂದ್ ಮಾಡ್ರೀ... ಹೀಗೆಂದು ಅಳಲು ತೋಡಿಕೊಂಡಿದ್ದು ತಾಲೂಕಿನ ನಾರಾಯಣಪೂರ ಗ್ರಾಮದ ಮಹಿಳೆ.
ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಸರಾಯಿ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಜಮಾ ಅತೆ ಇಸ್ಲಾಮಿ ಹಿಂದ್ ಸಂಘಟನೆ ಹಾಗೂ ರೈತ ಸಂಘದ ಗ್ರಾಮ ಶಾಖೆ ಪದಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮದಲ್ಲಿ ನಡೆದ ಪ್ರತಿಭಟನೆ ವೇಳೆ ಅಧಿಕಾರಿಗಳ ಸಮ್ಮುಖ ಮಾತನಾಡಿದ ಮಹಿಳೆ, ಜೀವನ ಸಾಗಿಸೋದು ನನಗ ತುಂಬಾ ಕಷ್ಟ ಆಗ್ತಿದೆ. ಇಲ್ಲಿನ ಕಷ್ಟ ನೋಡಿ ಊರ ಬಿಟ್ಟು ಹೋಗ್ಬೇಕು ಅನ್ನಿಸುತ್ತಿದೆ. ಹ್ಯಾಂಗರ ಮಾಡಿ ನಮ್ಮ ಊರಿಂದ ಸರಾಯಿ ಬಂದ್ ಮಾಡಿ ಪುಣ್ಯಕಟ್ಟಿಕೊಳ್ಳಿ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ.
ಪ್ರತಿಭಟನಾ ಮೆರವಣಿಗೆ : ಗ್ರಾಮದ ಜಮಿಯಾ ಮಸೀದಿಯಿಂದ ಮಹಾದೇವ ಮಂದಿರದ ಮಾರ್ಗವಾಗಿ ಗ್ರಾಪಂವರೆಗೆ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಡೆಸಿದ ಗ್ರಾಮಸ್ಥರು, ತಕ್ಷಣ ಸರಾಯಿ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿದರು. ಮೆರವಣಿಗೆಯಲ್ಲಿ ಸರಾಯಿ ಸೇವನೆಯಿಂದ ಆಗುವ ದುಷ್ಟರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಫಲಕಗಳು ಗಮನ ಸೆಳೆದವು.
ಗ್ರಾಮದಲ್ಲಿನ ಕೆಲ ಕಿರಾಣಿ ಅಂಗಡಿ, ಹೋಟೆಲ್ ಸೇರಿ ಇತರ ಕಡೆ ಮುಕ್ತವಾಗಿ ಸರಾಯಿ ಮಾರಾಟ ನಡೆಯುತ್ತಿದೆ. ಇದರಿಂದಾಗಿ ಹಲವು ಬಡ ಕುಟುಂಬಗಳು ಬೀದಿಗೆ ಬರುತ್ತಿವೆ. ಸರಾಯಿ ಮಾರಾಟ ತಡೆಯುವಂತೆ ಸಂಬಂಧ ಪಟ್ಟ ಇಲಾಖೆಯವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನೆ ಆಗಿಲ್ಲ. ಸರಾಯಿ ಮಾರಾಟ ಬಂದ್ ಮಾಡಲು ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬೇಡಿಕೆ ಕುರಿತು ತಹಶೀಲ್ದಾರರಿಗೆ ಬರೆದ ಮನವಿ ಪತ್ರವನ್ನು ಗ್ರಾಮ ಲೆಕ್ಕಾಧಿಕಾರಿ ಶಂಕರ ಹಾಗೂ ಪಿಡಿಒ ಶಿವಯೋಗಿ ಸ್ವಾಮಿ ಅವರಿಗೆ ಸಲ್ಲಿಸಲಾಯಿತು.