ಬೀದರ್: ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿದ ಪರಿಣಾಮ ಮಗುವೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಗಾಡಿವಾನ್ ಓಣಿಯಲ್ಲಿ ಇಂದು ನಡೆದಿದೆ.
ಆಸ್ಮಾ ಸಮೀರ ಶೇಖ್ ಎಂಬ ಎರಡು ವರ್ಷದ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಮಗು ಮನೆಯ ಎದುರಿನ ರಸ್ತೆಯಲ್ಲಿ ಆಟವಾಡುತ್ತಿದ್ದಾಗ ನಾಯಿಗಳು ದಾಳಿ ನಡೆಸಿವೆ. ಮಗುವಿನ ಮುಖ ಹಾಗೂ ದೇಹದ ಹಲವು ಕಡೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಬಾಲಕಿ ಕಿರುಚಾಡುತ್ತಿದ್ದಂತೆ ಪೋಷಕರು ಓಡಿ ಬಂದು ಮಗುವನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ವಿದ್ಯಾರ್ಥಿ ಮೇಲೆ ಬೀದಿ ನಾಯಿ ದಾಳಿ: ಬಾಲಕನಿಗೆ ಗಂಭೀರ ಗಾಯ
ಗಂಭೀರವಾಗಿ ಗಾಯಗೊಂಡ ಬಾಲಕಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾಲಕಿಗೆ 36ಕ್ಕೂ ಹೆಚ್ಚು ಹೊಲಿಗೆಯನ್ನು ವೈದ್ಯರು ಹಾಕಿದ್ದಾರೆ. ಬಸವಕಲ್ಯಾಣ ನಗರಸಭೆಯ ನಿರ್ಲಕ್ಷ್ಯದಿಂದ ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸ ಹೆಚ್ಚಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ.