ಬೀದರ್/ಬಸವಕಲ್ಯಾಣ: ದೆಹಲಿಯ ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಎಸ್‌ಐಒ ಸ್ಥಳೀಯ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿಯ ಜಮಾಯಿಸಿದ ಪ್ರತಿಭಟನಾಕಾರರು ಕೈ ಹಾಗೂ ಹಣೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ನಡೆಸಿದರು. ಪ್ರಧಾನಿ, ಗೃಹ ಸಚಿವರು, ಆರ್‌ಎಸ್‌ಎಸ್ ಹಾಗೂ ದೆಹಲಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲ ಸಮುದಾಯದ, ಜಾತಿ, ಧರ್ಮೀಯರು ಒಗ್ಗೂಡಿ ದೇಶದಲ್ಲಿ ಕೋಮು ಸೌಹಾರ್ಧತೆಯಿಂದ ಬಾಳುತ್ತಿದ್ದಾರೆ. ಆದರೆ, ಕೇಂದ್ರ ಬಿಜೆಪಿ ಸರ್ಕಾರ ಎನ್‌ಆರ್‌ಸಿ ಮತ್ತು ಸಿಎಎ ಜಾರಿಗೆ ತರುವ ಮೂಲಕ ದೇಶದಲ್ಲಿ ಕೋಮುವಾದ ಬೆಳೆಸುತ್ತಿದೆ. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ, ಕಠೀಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್‌ಐಓ ಜಿಲ್ಲಾಧ್ಯಕ್ಷ ಮಹಮದ್ ನಜೀಮೋದ್ದಿನ್, ತಾಲೂಕು ಘಟಕ ಅಧ್ಯಕ್ಷ ಅಸಾದುಲ್ಲಾ ಖಾನ್, ಜಮಾಯಿತೆ ಇಸ್ಲಾಮಿ ಹಿಂದ್ ಸಂಘಟನೆ ರಾಜ್ಯ ಕಾರ್ಯದರ್ಶಿ ಅಸ್ಲಾಮ್ ಜನಾಬ್, ಮುಸ್ಲಿಂ ಬೈತುಲ್ ಮಾಲ್ ಅಧ್ಯಕ್ಷ ಮಕದುಮ್ ಮೋಹಿಯೋದ್ದಿನ್ ಸೇರಿದಂತೆ ಮತ್ತಿತ್ತರರು ಭಾಗವಹಿಸಿದ್ದರು.