ಬೀದರ್: ಕಾಂಗ್ರೆಸ್ ಪಕ್ಷ ಉಪಚುನಾವಣೆಯಲ್ಲಿ ಸೋಲುತ್ತೆ ಎಂಬ ಸತ್ಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಗೊತ್ತಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಈ ಸತ್ಯವನ್ನು ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಈ ಬಾರಿಯ ಉಪಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಸಿ ಎಂ ಬಿ ಎಸ್ ಯಡಿಯೂರಪ್ಪ ಹೇಳಿದಾಗ, ಅದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ಅವರು, ' ಹೌದು, ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಾವು ಗೆದ್ದಿದ್ದೆವು, ಈಗ ನಿಮ್ಮ ಸರ್ಕಾರವಿದೆ, ನೀವು ಗೆಲ್ಲುತ್ತೀರಿ' ಎಂದಿದ್ದರು. ಆದರೂ ಈ ಸತ್ಯವನ್ನು ಮರೆಮಾಚಲು ಇದೀಗ ಅವರು ಸುಳ್ಳು ಹೇಳುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಲು ಯಾರೂ ತಯಾರಿಲ್ಲ. ಜನತಾದಳ ಮತ್ತು ಎಂಐಎಂ ಪಕ್ಷಗಳ ಅಭ್ಯರ್ಥಿಗಳ ಸ್ಪರ್ಧೆಯಿಂದ ಕಾಂಗ್ರೆಸ್ ಪಕ್ಷ ಗಾಬರಿಯಾಗಿದೆ. 2018 ರ ಚುನಾವಣೆಯಲ್ಲಿ ಎಸ್ಎಫ್ಐ ಮತ್ತು ಎಂಐಎಂ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದಾಗ ಅವರ ಜೊತೆ ಒಪ್ಪಂದ ಮಾಡಿಕೊಂಡವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು.
ಕೋವಿಡ್ ನಿಯಂತ್ರಣಕ್ಕೆ ದಿಟ್ಟ ಕ್ರಮ: ಜನರ ಸಹಕಾರ ಇದ್ದರೆ ಮಾತ್ರ ಯಾವುದೇ ಲಾಕ್ಡೌನ್ ಮತ್ತು ಆರ್ಥಿಕ ನಿರ್ಬಂಧ ಇಲ್ಲದೇ ಕೋವಿಡ್ ನಿಯಂತ್ರಣ ಸಾಧ್ಯ. ಇಲ್ಲದಿದ್ದರೆ ಎಲ್ಲರೂ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ನೈಟ್ ಕರ್ಪ್ಯೂ ಜಾರಿಗೊಳಿಸಿದ್ದಾರೆ. ಕೋವಿಡ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ, ರಾತ್ರಿ ಕರ್ಫ್ಯೂ ಜಾರಿ ಅನಿವಾರ್ಯವಾಗಿದೆ. ನೈಟ್ ಕರ್ಫ್ಯೂ ಜಾರಿ ಮಾಡಲಾಗಿರುವ ಜಿಲ್ಲೆಗಳಲ್ಲಿ ನಿಯಂತ್ರಣ ಕ್ರಮಗಳನ್ನ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ಈಗಾಗಲೇ ನಾನು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಜನರಿಗೆ ಈಗ ಕೋವಿಡ್ ಬಗ್ಗೆ ಹೆಚ್ಚಿಗೆ ಹೇಳಬೇಕಾದ ಅವಶ್ಯಕತೆ ಇಲ್ಲ. ಕೋವಿಡ್ ನಿಯಂತ್ರಣ ತಪ್ಪಿದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ. ಸದ್ಯಕ್ಕೆ ನಾವೇ ಪರಿಸ್ಥಿತಿಯನ್ನು ನಿಭಾಯಿಸುವ ಸ್ಥಿತಿಯಲ್ಲಿದ್ದೇವೆ. ಆದರೆ, ಇದಕ್ಕೆ ಜನರ ಸಹಕಾರ ಅತಿಮುಖ್ಯ. ಜನರ ಸಹಕಾರ ಸಿಕ್ಕಿದ್ದೇ ಆದರೆ ಇದನ್ನು ನಾವು ಯಾವುದೇ ಲಾಕ್ಡೌನ್ ಇಲ್ಲದೇ, ಆರ್ಥಿಕ ನಿರ್ಬಂಧ ಎದುರಿಸದೇ ನಿಯಂತ್ರಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮತ್ತೊಮ್ಮೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯಲ್ಲಿ ನಾವಿರಬೇಕು ಎಂದರು.
ರಾತ್ರಿ ವೇಳೆ ಬಾರ್ ಮತ್ತು ಪಬ್ಗಳನ್ನು ಬಂದ್ ಮಾಡಲಾಗುವುದು. ಆದರೆ, ಬಸ್ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸುವವರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಕಾರ್ಯಕ್ರಮಗಳ ಆಯೋಜಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಓದಿ: ಕೋವಿಡ್ ಹರಡುವ ಭಯದಿಂದ ಕಂಪೌಂಡ್ ಹಾರಿದ ವಿದ್ಯಾರ್ಥಿನಿಯರು - ವಿಡಿಯೋ