ಬಸವಕಲ್ಯಾಣ: ವೇದಿಕೆಯಲ್ಲಿ ಮಾತನಾಡುತ್ತಿರುವಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಂಚೆ ಜಾರಿದ ಪ್ರಸಂಗ ಜರುಗಿತು. ಇಲ್ಲಿನ ಸಸ್ತಾಪೂರ ಬಂಗ್ಲಾ ಬಳಿಯ ದಿ.ಶಾಸಕ ಬಿ.ನಾರಾಯಣರಾವ ಅವರ ಸಮಾಧಿ ಸ್ಥಳದಲ್ಲಿ ಆಯೋಜಿಸಿದ ಶ್ರದ್ಧಾಂಜಲಿ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಭಾಷಣ ಮಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಎದ್ದು ನಿಂತು ಮಾತನಾಡುವಾಗ ಸಿದ್ದರಾಮಯ್ಯನವರ ಪಂಚೆ ಸಡಿಲಗೊಂಡು ಬೀಳುವ ಹಂತದಲ್ಲಿತ್ತು. ಅದನ್ನು ಗಮನಿಸಿದ ನಗರ ಠಾಣೆ ಪಿಎಸ್‌ಐ ಗುರು ಪಾಟೀಲ್ ಅವರು ವೇದಿಕೆಗೆ ಆಗಮಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತು ಹುಮನಾಬಾದ ಶಾಸಕ ರಾಜಶೇಖರ ಪಾಟೀಲ್ ಅವರಿಗೆ ಗುಟ್ಟಾಗಿ ವಿಷಯ ತಿಳಿಸಿದರು. ಆಗ ತಕ್ಷಣವೇ ಹುಮನಾಬಾದ ಶಾಸಕರು, ಸಿದ್ದರಾಮಯ್ಯನವರ ಬಳಿ ಆಗಮಿಸಿ ಪಂಚೆ ಸಡಿಲಗೊಂಡಿರುವುದನ್ನು ಗಮನಕ್ಕೆ ತಂದರು. ಆಗ ಸಿದ್ದರಾಮಯ್ಯ ಪಂಚೆಯನ್ನು ಬಿಗಿಯಾಗಿ ಕಟ್ಟಿಕೊಳ್ಳಲು ಮುಂದಾದರು.
ಕಾರ್ಯಕ್ರಮದಲ್ಲಿ ಸೇರಿದ ಸಾವಿರಾರು ಜನರು, ವೇದಿಕೆಯಲ್ಲಿ ನಡೆದ ಪ್ರಸಂಗದಿಂದ ನಸುನಕ್ಕರು. ಆಗ ಸಿದ್ದರಾಮಯ್ಯ ಅವರು ಪಂಚೆ ಕಟ್ಟಿಕೊಳ್ಳುತ್ತಲೇ ಮಾತನಾಡಿ, 'ಹೊಟ್ಟೆಗೆ ಹಸಿವಾಗಿದೆ ಅಂತ ಕಾಣಿಸುತ್ತಿದೆ. ಅದಕ್ಕಾಗಿಯೇ ಲುಂಗಿ ಸಡಿಲಗೊಂಡಿದೆ' ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇದೇ ವೇಳೆ ವೇದಿಕೆಯಲ್ಲಿ ಕುಳಿತಿದ್ದ ಕೆಲ ಮುಖಂಡರು, 'ಲುಂಗಿ ಕಳಚುತ್ತಿರುವುದು ಒಳ್ಳೆಯ ಸಂಕೇತವೇ ಆಗಿದೆ ಸರ್. ಮುಂದೆ ನೀವು ಮತ್ತೆ ಮುಖ್ಯಮಂತ್ರಿಗಳಾಗಬಹುದು' ಎಂದರು. 'ಏ ಹಾಗೆಲ್ಲ ಹೇಳ ಬ್ಯಾಡ್ರಪ್ಪಾ, ಇದನ್ನು ಕೇಳಿಸಿಕೊಳ್ಳುವವರಿಗೆ ನೋವಾಗುತ್ತದೆ. ಅದೆಲ್ಲ ಮುಂದೆ ಸಮಯ ಬಂದಾಗ ಜನ ಏನ್ ತೀರ್ಮಾನ ಮಾಡ್ತಾರೆ ಅಂತ ನೋಡೋಣ' ಎಂದು ಸಿದ್ದರಾಮಯ್ಯ ಹೇಳಿದರು.