ಬಸವಕಲ್ಯಾಣ: ನಗರದ ಶರಣ ಹರಳಯ್ಯನವರ ಗವಿಯಲ್ಲಿ 9 ದಿನಗಳ ಕಾಲ ನಡೆಯಲಿರುವ ಶರಣ ವಿಜಯೋತ್ಸವ, ನಾಡ ಹಬ್ಬ ಕಾರ್ಯಕ್ರಮಕ್ಕೆ ಸೋಮವಾರ ಸಂಜೆ ಚಾಲನೆ ನೀಡಲಾಯಿತು.
ಹರಳಯ್ಯ ಗವಿಯ ಡಾ. ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನವರ ನೇತೃತ್ವದಲ್ಲಿ 9 ದಿನಗಳ ಕಾಲ ನಡೆಯಲಿರುವ ಶರಣ ವಿಜಯೋತ್ಸವ ಕಾರ್ಯಕ್ರಮಕ್ಕೆ ಇಳಕಲ್ನ ಶ್ರೀ ಗುರಮಹಾಂತ ಮಹಾಸ್ವಾಮೀಜಿಗಳು ಬಸವ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಬೆಂಗಳೂರಿನ ನಾಟಕ ಶಾಲೆಯ ನಿರ್ದೇಶಕರಾದ ಸಿ. ಬಸವಲಿಂಗಯ್ಯ ಮಾತನಾಡಿ, ಶರಣರ ತತ್ವಗಳನ್ನು ಅರಿತು ಆಚರಣೆಗೆ ತಂದಲ್ಲಿ ಸಮಸ್ಯೆ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಬೀದರ್ ನಗರದಲ್ಲಿ ಬಡರೋಗಿಗಳಿಗೆ ಅತಿ ಕಡಿಮೆ ದರದಲ್ಲಿ ಹಾಗೂ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಿರುವ ಬೀದರ್ನ ವೈದ್ಯರುಗಳಾದ ಡಾ. ಮಾರುತಿರಾವ್ ಚಂದನಹಳ್ಳಿ ಹಾಗೂ ಡಾ. ಮಕ್ಸೂದ್ ಚಂದಾ ಅವರಿಗೆ ಬಸವ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೀದರ್ನ ಶರಣ ಕಲಾ ಲೋಕ ತಂಡದಿಂದ ಶರಣ ದರ್ಶನ ನಾಟಕ ಪ್ರದರ್ಶನ ಜರುಗಿತು. ಆಕಾಶವಾಣಿ ಕಲಾವಿದೆ ಅಶ್ವಿನಿ ರಾಜಕುಮಾರ ವಚನ ಸಂಗೀತ ನುಡಿಸಿದರೆ, ನಾರಾಯಣಪೂರ ಶಾಲೆಯ ಮಕ್ಕಳಿಂದ ವಚನ ನೃತ್ಯ ಪ್ರಸ್ತುತಪಡಿಸಿದರು.