ಬೀದರ್: ಅಡುಗೆ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿ ಅಸಭ್ಯವಾಗಿ ವರ್ತಿಸಿದ್ದ ಎಂಬ ಆರೋಪದ ಹಿನ್ನೆಲೆ ಕಮಲನಗರ ತಾಲೂಕಿನ ಖತಗಾಂವ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಶಿವಕುಮಾರ್ ಡೊಂಗರೆ ಅವರನ್ನು ಡಿಡಿಪಿಐ ಅಮಾನತುಗೊಳಿಸಿದ್ದಾರೆ.
ಲೈಂಗಿಕ ಕಿರುಕುಳಕ್ಕೆ ಪ್ರಯತ್ನಿಸಿದ್ದಲ್ಲದೇ ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕನ ವಿರುದ್ಧ ಗ್ರಾಮಸ್ಥರು ಮತ್ತು ಅಡುಗೆ ಸಿಬ್ಬಂದಿ ನೀಡಿದ ದೂರಿನನ್ವಯ, ವಿಷಯ ಪರಿವೀಕ್ಷಕರು ಜಂಟಿ ವಿಚಾರಣಾ ತಂಡ ಶಾಲೆಗೆ ತೆರಳಿ ಪರಿಶೀಲಿಸಿತ್ತು. ಆರೋಪ ಸಾಬೀತಾಗಿರುವ ಕುರಿತು ವರದಿ ಸಲ್ಲಿಸಿದ್ದರಿಂದ 15 ದಿನದೊಳಗೆ ಶಿಕ್ಷಕನಿಗೆ ರಕ್ಷಣಾ ಹೇಳಿಕೆ ನೀಡುವಂತೆ ನೋಟಿಸ್ ನೀಡಲಾಗಿತ್ತು.
ಆದರೆ, ಅವಧಿ ಮುಗಿದರೂ ಶಿಕ್ಷಕ ಈ ಬಗ್ಗೆ ಕಚೇರಿಗೆ ತಮ್ಮ ಹೇಳಿಕೆ ದಾಖಲಿಸದ ಕಾರಣ, ಶಿಕ್ಷಕನ ಬೇಜವಾಬ್ದಾರಿ ಮತ್ತು ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯ ವರ್ತನೆ ಎಂಬ ಕಾರಣ ನೀಡಿ ಆರೋಪಿತ ಶಿಕ್ಷಕ ಡೊಂಗರೆ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಡಿಡಿಪಿಐ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸೊಸೆಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಮಾವ: ಸುಪಾರಿ ಕೊಟ್ಟು ಮಾವನ ಕೊಲೆ ಮಾಡಿಸಿದ ಬೀಗರು..